ರಾಜಕೀಯ ಸುದ್ದಿ

ಮತದಾನದ ನಡುವೆ ಕಾಶ್ಮೀರದಲ್ಲಿ ಸೇನಾಪಡೆ ಮೇಲೆ ಉಗ್ರರ ದಾಳಿ:ಓರ್ವ ಯೋಧ ಹುತಾತ್ಮ

Share It

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಸೇನಾಪಡೆಯ ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ ಓರ್ವ ಯೋಧ ಹುತಾತ್ಮನಾಗಿರುವ ಘಟನೆ ನಡೆದಿದೆ.

ಮತದಾನಕ್ಕೆ ಮೂರು ವಾರಗಳ ಮೊದಲು ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರು ಭಾರತೀಯ ವಾಯುಪಡೆ (ಐಎಎಫ್) ಸೇರಿ ಎರಡು ಭದ್ರತಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಭಾರತೀಯ ವಾಯಪಡೆಯ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ.

ಶನಿವಾರ ಸಂಜೆ ೬.೧೫ರ ಸುಮಾರಿಗೆ ಐಎಎಫ್‌ಗೆ ಸೇರಿದ ಒಂದು ವಾಹನ ಸೇರಿದಂತೆ ಎರಡು ಭದ್ರತಾ ವಾಹನಗಳು ಬರುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಜಿಲ್ಲೆಯ ಸುರನ್‌ಕೋಟೆ ಪ್ರದೇಶದ ಸಮೀಪದ ಸನೈ ಟಾಪ್ ಕಡೆಗೆ ವಾಹನಗಳು ಬರುತ್ತಿದ್ದವು. ಈ ವೇಳೆ ನಡೆದ ದಾಳಿಯಲ್ಲಿ ಐವರು ಯೋಧರು ಗಾಯಗೊಂಡಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿದ್ದ ಇಬ್ಬರಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ಸೇನಾಪಡೆ ದೃಢಪಡಿಸಿದೆ.

ಕಳೆದ ವರ್ಷ ಬುಫ್ಲಿಯಾಜ್‌ನಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಗುಂಪಿನಿAದಲೇ ಈ ದಾಳಿ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಉಗ್ರರ ದಾಳಿ ಬೆನ್ನಲ್ಲೇ ವಾಯುಸೇನಾ ಪಡೆಯ ಯೋಧರು ಪ್ರತಿದಾಳಿ ನಡೆಸಿದರು. ಭಯೋತ್ಪಾದಕರ ವಿರುದ್ಧ ಸ್ಥಳೀಯ ಭದ್ರತಾ ಪಡೆಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಎಕೆ ಅಸಾಲ್ಟ್ ರೈಫಲ್‌ಗಳನ್ನು ಹೊಂದಿದ್ದ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಸೇನಾ ಟ್ರಕ್‌ಗೆ ಹೆಚ್ಚಿನ ಹಾನಿಯಾಗಿದೆ. ದಾಳಿ ಬಳಿಕ ಹತ್ತಿರದ ಅರಣ್ಯಪ್ರದೇಶದೊಳಗೆ ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರೆಸೇನಾ ಪಡೆಗಳು ಮತ್ತು ಪೊಲೀಸರು ಶುಕ್ರವಾರದಿಂದ ಪೂಂಚ್‌ನಲ್ಲಿ ಶೋಧಕಾರ್ಯ ನಡೆಸುತ್ತಿದ್ದರು. ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಪ್ರದೇಶವನ್ನು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಯಾರೂ ಸಿಕ್ಕಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂಂಚ್ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಮೇ ೨೫ ರಂದು ಆರನೇ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ.


Share It

You cannot copy content of this page