ಬೆಂಗಳೂರು: ಸಾವು ಸಂಭವಿಸುವಂತಹ ಅಜಾಗರೂಕತೆ ಚಾಲನೆ ಮೂಲಕ ಅಪಘಾತಕ್ಕೆ ಕಾರಣವಾಗುವ ವಾಹನ ಚಾಲಕನಿಗೆ ಕನಿಷ್ಠ ಶಿಕ್ಷೆ ವಿಧಿಸದಿದ್ದರೆ, ಅದು ಸಮಾಜಕ್ಕೆ ಮಾಡುವ ಅನ್ಯಾಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಪಘಾತದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಅಂಬ್ಯುಲೆನ್ಸ್ ಡ್ರೈವರ್, ತಮಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಪೀಠ ಹೀಗೆ ಅಭಿಪ್ರಾಯಪಟ್ಟಿದೆ.
ಚಿಕ್ಕಮಗಳೂರು ತಾಲೂಕಿನ ಸಂತೋಷ್ ಎಂಬ ಚಾಲಕ ತನ್ನ ಅಪರಾಧಕ್ಕಾಗಿ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಉಮೇಶ್ ಎಂ. ಅಡಿಗ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ಈ ವೇಳೆ, ಅಂಬ್ಯುಲೆನ್ಸ್ ಚಾಲನೆ ಮೂಲಕ ಮತ್ತೊಂದು ಕಾರು ಚಾಲಕನ ಸಾವಿಗೆ ಕಾರಣವಾಗಿರುವ ಸಂತೋಷ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಅಪಘಾತ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸದೇ ಹೋದರೆ, ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.