ಬೆಂಗಳೂರು:ವಿದೇಶಿ ಕಾರ್ಮಿಕರಿಗೂ ಉದ್ಯೋಗಿಗಳ ಭವಿಷ್ಯನಿಧಿ(ಇಪಿಎಫ್) ಮತ್ತು ಉದ್ಯೋಗಿಗಳ ಪಿಂಚಣಿ(ಇಪಿ) ಸೌಲಭ್ಯವನ್ನು ವಿಸ್ತರಣೆ ಮಾಡಲು ತೀರ್ಮಾನಿಸಿದ್ದ ಕೇಂದ್ರ ಸರಕಾರದ ನಡೆಗೆ ಹೈಕೋರ್ಟ್ ತಡೆಯೊಡ್ಡಿದೆ.
ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಸ್ಟೋನ್ ಹಿಲ್ ಪ್ರತಿಷ್ಠಾನ ಸೇರಿದಂತೆ 20 ಕ್ಕೂ ಹೆಚ್ಚು ಅರ್ಜಿದಾರರು ಸಲ್ಲಿಕೆ ಮಾಡಿದ್ದ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನಂತರ ಇದೊಂದು ಅಸಂವಿಧಾನಿಕ ಮತ್ತು ಸ್ವೇಚ್ಛೆಯ ಕ್ರಮ ಎಂದು ಅಭಿಪ್ರಾಯಪಟ್ಟಿದೆ.
ಜತೆಗೆ, ನಿರ್ದಿಷ್ಟ ಉದ್ಯೋಗಿಗಳಿಗೆ ರೂಪಿಸಲಾಗಿರುವ ಯೋಜನೆಯನ್ನು ಭಾರಿ ಹಣ ಸಂಪಾದಿಸುವ ಶ್ರೀಮಂತ ವಿದೇಶಿ ಉದ್ಯೋಗಿಗಳ ಅಗತ್ಯ ಪೂರೈಸಲು ಅನುಮತಿ ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ. ಕಡಿಮೆ ವೇತನ ಪಡೆಯುವ ನೌಕರರಿಗೆ ನಿವೃತ್ತಿಯ ನಂತರ ಅನುಕೂಲವಾಗುವಂತೆ ಕಾಯಿದೆಯನ್ನು ರೂಪಿಸಲಾಗಿದೆಯೇ ಹೊರತು, ಲಕ್ಷಾಂತರ ರು. ವೇತನ ಪಡೆಯುವವರಿಗಲ್ಲ ಎಂದು ತಿಳಿಸಿದೆ.
ವಿದೇಶಿ ಕೆಲಸಗಾರರು ಪ್ರತ್ಯೇಕ ವರ್ಗಕ್ಕೆ ಸೇರುತ್ತಾರೆ. ಭಾರತದಲ್ಲಿ ಅವರು ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ, ಅವರ ಭವಿಷ್ಯಕ್ಕೆ ಸರಕಾರದ ನಿಧಿಯನ್ನು ಬಳಕೆ ಮಾಡಿದರೆ, ಇಲ್ಲಿಯೇ ಇದ್ದುಕೊಂಡು ದುಡಿಯುವ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ ಎಂದು ೨೦೦೮ ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೂ ವಿಸ್ತರಣೆ ಮಾಡಿದ್ದ ಇಪಿಎಫ್ ಕಲಂ 83 ಮತ್ತು ಇಪಿ ಯೋಜನೆಯ ಕಲಂ 43 ಎ ಅನ್ನು ಅರ್ಜಿದಾರರು ಪ್ರಶ್ನೆ ಮಾಡಿದ್ದರು.