ಬೆಂಗಳೂರು: ವಿಡಿಯೋವೊಂದನ್ನು ಬಳಸಿಕೊಂಡು ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡಿದ್ದ ಬಬಿಜೆಪಿ ನಾಯಕರಿಗೆ ಪೊಲೀಸರು ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಪ್ರಚೋದನಕಾರಿ ವಿಡಿಯೋವೊಂದನ್ನು ಹಂಚಿಕೊAಡಿದ್ದ ಆರೋಪದಡಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿಯ ಸಾಮಾಜಿಕ ಜಾಲತಾಣ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ನೊಟೀಸ್ ನೀಡಿದ್ದಾರೆ.
ಕೋಮು ಸೌಹಾರ್ದತೆ ಕದಡುವ ವಿಡಿಯೋವೊಂದನ್ನು ಬಿಜೆಪಿ ಕರ್ನಾಟಕ ಎಕ್ಸ್ ಖಾತೆಯಿಂದ ಅಪ್‌ಲೋಡ್ ಮಾಡಿ, ಎಚ್ಚರ, ಎಚ್ಚರ ಎಂದು ಬರೆಯಲಾಗಿತ್ತು. ಈ ವಿಡಿಯೋಗೆ ಸಂಬಂಧಿಸಿದಂತೆ ಮೇ. ೫ ರಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ದೂರು ನೀಡಿದ್ದರು.
ಸಮಾಜದಲ್ಲಿ ಎರಡು ವರ್ಗಗಳ ನಡುವೆ ದ್ವೇಷವನ್ನುಂಟು ಮಾಡುವ ಹಾಗೂ ವೈಷಮ್ಯ ಮೂಡಿಸುವ ಉದ್ದೇಶದಿಂದ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ ಎಂದು ದೂರಲಾಗಿತ್ತು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರು ನಾಯಕರಿಗೆ ನೊಟೀಸ್ ನೀಡಿದ್ದು, ನೊಟೀಸ್ ತಲುಪಿದ ಏಳು ದಿನಗಳಲ್ಲಿ ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಹಾಜರಾಗದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಲಾಗಿದೆ.