ಅಪರಾಧ ರಾಜಕೀಯ ಸುದ್ದಿ

ಹಾಸನ ಘಟನೆ, ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಸಿಬಿಐ ತನಿಖೆಗೆ ಜೆಡಿಎಸ್ ಮಹಿಳಾ ಘಟಕ ಆಗ್ರಹ

Share It

ಪೆನ್ ಡ್ರೈವ್ ಹಂಚಿದ ಕಿಡಿಗೇಡಿಗಳ ಬಂಧಿಸಿ]

ಬೆಂಗಳೂರು: ಅಪಾರ ಪ್ರಮಾಣದಲ್ಲಿ ಪೆನ್ ಡ್ರೈವ್ ಗಳನ್ನು ಹಂಚುವ ಮೂಲಕ ಮಹಿಳೆಯರ ಮಾನಹಾನಿಗೆ ಕಾರಣವಾಗಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಅವರು ಒತ್ತಾಯಿಸಿದರು.

ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಶ್ಲೀಲ ವಿಡಿಯೋಗಳನ್ನು ಸೋರಿಕೆ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಅಪಚಾರ ಎಸಗಿರುವ ಕಿರಾತಕರನ್ನು ತಕ್ಷಣವೇ ಅರೆಸ್ಟ್ ಮಾಡಬೇಕು ಎಂದು ಅಗ್ರಹಿಸಿದರು.

ಸಚಿವ ಸಂಪುಟದ ಪ್ರಭಾವಿ ಸಚಿವರೇ ಈ ವಿಡಿಯೋಗಳ ವಿತರಣೆಯ ರೂವಾರಿ. ಹೀಗಾಗಿ ಸಂತ್ರಸ್ಥ ಮಹಿಳೆಯರಿಗೆ ನ್ಯಾಯ ದೊರಕಿಸುವುದು ಅಸಾಧ್ಯ. ಹರಿಯಬಿಟ್ಟಿರುವ ವಿಡಿಯೋಗಳಿಂದ ಸಂತ್ರಸ್ಥೆಯರು ಅಪಾರ ನೋವು, ಅವಮಾನ ಮತ್ತು ಯಾತನೆ ಅನುಭವಿಸುತ್ತಿದ್ದಾರೆ. ಇವರೊಂದಿಗೆ ಸಂತ್ರಸ್ಥೆ ಕುಟುಂಬದವರ ಮೇಲೆ ಉಂಟಾಗಿರುವ ಹಾನಿ ಮತ್ತು ಅಪಮಾನ ವಿವರಿಸಲು ಅಸಾಧ್ಯ. ವಿಡಿಯೋದಲ್ಲಿರುವ ಮಹಿಳೆಯರ ಗುರುತು ಬಹಿರಂಗ ಆಗುವಂತೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಹೇಳಿದರು.

ಎಸ್ ಐಟಿಯಿಂದ ನೊಂದವರಿಗೆ ನ್ಯಾಯ ಸಿಗಲ್ಲ: ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾದಳ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಸಂತ್ರಸ್ಥ ಮಹಿಳೆಯರಿಗೆ ಹಾಗೂ ಅವರ ಕುಟುಂಬದವರಿಗೆ ನ್ಯಾಯ ಒದಗಿಸುವಲ್ಲಿ ಎಸ್ ಐಟಿ ವಿಫಲವಾಗಿದೆ. ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

ಸಿಎಂ, ಡಿಸಿಎಂ ಹೆಸರು ಬಂದಿದೆ: ಅಶ್ಲೀಲಗಳನ್ನು ಒಳಗೊಂಡ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಸಂಖ್ಯಾತ ಪೆನ್ ಡ್ರೈವ್ ಗಳ ಮುಖೇನ ರಾಜ್ಯದಾದ್ಯಂತ ಹಂಚಿರುವ ಷಡ್ಯಂತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೆಸರೂಗಳನ್ನು ಹೊಳೆನರಸಿಪುರದ ಬಿಜೆಪಿ ಮುಖಂಡರು, ವಕೀಲರಾದ ದೇವರಾಜೇಗೌಡರು ಸುದ್ದಿಗೋಷ್ಠಿಯಲ್ಲಿ ಸಾಕ್ಷಿ ಸಮೇತ ಬಹಿರಂಗ ಮಾಡಿದ್ದರು. ಇದನ್ನು ಎಸ್ ಐಟಿ ಗಣನೆಗೆ ತೆಗೆದುಕೊಂಡಿಲ್ಲವೇ ಎಂದು ರಶ್ಮಿ ರಾಮೇಗೌಡ ಪ್ರಶ್ನಿಸಿದರು.

ಪೆನ್ ಡ್ರೈವ್ ಗಳನ್ನು ಹಾಸನದಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮ ಜರುಗಿಸಿರುವುದಿಲ್ಲ ಎಂದು ಅವರು ಆರೋಪಿಸಿದರು. ಇದೇ ವೇಳೆ ಅವರು ಮಹಿಳಾ ಆಯೋಗಕ್ಕೆ ಸಲ್ಲಿಸಿದ ದೂರಿನ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಬೆಂಗಳೂರು ಮಹಾನಗರ ಜನತಾದಳ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಎಸ್ ರಾವ್, ವಕ್ತಾರರಾದ ಪ್ರಶಾಂತಿ, ರಾಜಾಜಿನಗರ ಕ್ಷೇತ್ರದ ಮಹಿಳಾ ಅಧ್ಯಕ್ಷೆ ಕವಿತಾ, ರಾಜ್ಯ ಕಾರ್ಯದರ್ಶಿ ಮಂಗಳಮ್ಮ, ನಗರದ ಮಹಿಳಾ ವಿಭಾಗದ ಪದಾಧಿಕಾರಿಗಳು, ಮುಖಂಡರುಗಳು ನಿಯೋಗದಲ್ಲಿ ಇದ್ದರು.


Share It

You cannot copy content of this page