ಬೆಂಗಳೂರು:ಅನುಕಂಪದ ಆಧಾರದಲ್ಲಿ ನೌಕರಿ ನೀಡುವ ಸಂಬಂಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೈಕೋರ್ಟ್ ಸೂಚಿಸಿದ್ದು, ಕೆಲವು ನಿಯಮಾವಳಿಗಳನ್ನು ರೂಪಿಸಿದೆ.
ಮೃತ ಸರ್ಕಾರಿ ಉದ್ಯೋಗಿಯ ಕುಟುಂಬದ ಅನಕ್ಷರಸ್ಥ ವಿಧವೆಯರು ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಲ್ಲಿ ಅಧಿಕಾರಿಗಳು ಅವರಿಗೆ ನೆರವಾಗಲು ಅಗತ್ಯ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿರುವ ಹೈಕೋರ್ಟ್, ಜೇವರ್ಗಿಯ ತಹಶೀಲ್ದಾರ್ ಕಚೇರಿಯಲ್ಲಿ ಜವಾನ ಹುದ್ದೆಯಲ್ಲಿದ್ದ ಪತಿ ಮೃತಪಟ್ಟ ಬಳಿಕ ಮಗನಿಗೆ ಅನುಕಂಪದ ಉದ್ಯೋಗ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಮತ್ತು ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ನ್ಯಾಯಪೀಠ, ಅನುಕಂಪದ ಆಧಾರದ ಹುದ್ದೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅನುಕಂಪದ ಆಧಾರದಲ್ಲಿ ನೇಮಕಾತಿಗಳಿಗಾಗಿ ಅರ್ಜಿಗಳ ನಿರ್ವಹಣೆ ಕುರಿತಂತೆ ಎಲ್ಲ ಇಲಾಖೆಗಳು ಏಕರೂಪದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸಬೇಕು. ಜತೆಗೆ, ಅನುಕಂಪದ ಆಧಾರದ ಅರ್ಜಿಗಳ ಲೋಪವಾಗದಂತೆ ನಿರ್ವಹಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡಬೇಕು ಎಂದು ಪೀಠ ಹೇಳಿದೆ.
ತನ್ನ ಕುಟುಂಬದವರನ್ನು ಕಳೆದುಕೊಂಡು ದುಃಖಿತರ ಕುಟುಂಬಗಳಿಗೆ ತಕ್ಷಣಕ್ಕೆ ಆರ್ಥಿಕ ಪರಿಹಾರ ಒದಗಿಸಲು ಅನುಕಂಪದ ಆಧಾರದ ಹುದ್ದೆಗಳ ಸೃಜನೆ ಮಾಡಲಾಗಿದೆ. ಈ ಹುದ್ದೆಗಳ ಮಂಜೂರು ಮಾಡುವಲ್ಲಿ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಹೊಂದಿರಲಿದೆ. ಅದರಲ್ಲಿಯೂ ವಿಶೇಷವಾಗಿ ವಿಧವೆಯರು, ಅನಕ್ಷರಸ್ಥರು ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಕಟ್ಟುನಿಟ್ಟಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಣೆ ಮಾಡಬೇಕು. ಈ ಕಾರ್ಯದಲ್ಲಿ ವಿಫಲವಾದಲ್ಲಿ ಮೃತರ ಅವಲಂಬಿತರು ಅವಕಾಶ ವಂಚಿತರಾಗಲಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಅನುಕಂಪ ನೇಮಕಾತಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ ಬಳಿಕ ಅದರಲ್ಲಿ ಯಾವುದೇ ಲೋಪಗಳಿದ್ದರೂ, 30 ದಿನಗಳಲ್ಲಿ ಲಿಖಿತವಾಗಿ ಸ್ವೀಕರಿಸಬೇಕು. ಅವರ ಅವಲಂಬಿತರ ಹಕ್ಕುಗಳು ಮತ್ತು ಅನ್ವಯವಾಗುವ ಮಿತಿಯ ಅವಧಿಯನ್ನು ನಿರ್ದಿಷ್ಟಪಡಿಸಬೇಕು. ಅನಕ್ಷರಸ್ಥ ವಿಧವೆಯರಿಗೆ ಅರ್ಜಿ ಸಲ್ಲಿಸುವಲ್ಲಿ ಸಹಾಯ ಮಾಡಬೇಕು. ಇತರೆ ಅವಲಂಬಿತರಿಗೆ ಮಾರ್ಗದರ್ಶನ ನೀಡಬೇಕು ಎಂದು ಪೀಠ ಹೇಳಿದೆ.
ಜತೆಗೆ, ಅರ್ಜಿಗಳ ಸಲ್ಲಿಸಿದ 90 ದಿನಗಳಲ್ಲಿ ಆ ಕುರಿತಂತೆ ನಿರ್ಧಾರ ತೆಗೆದುಕೊಳ್ಳಬೇಕು. ತಿರಸ್ಕರಿಸಿದ ಅರ್ಜಿಗಳಿಗೆ ಸಮಂಜಸವಾದ ಕಾರಣಗಳೊಂದಿಗೆ ಆದೇಶಗಳನ್ನು ಹೊರಡಿಸಬೇಕು. ಈ ಅಂಶವನ್ನು ಅರ್ಜಿದಾರರಿಗೆ ತಕ್ಷಣ ತಿಳಿಸಬೇಕು ಎಂದು ಪೀಠ ಹೇಳಿದೆ.
