ಯುದ್ಧದ ಭೀಕರತೆ ಸಾರುತ್ತಿದೆ ವಿಶ್ವಸಂಸ್ಥೆ ವರದಿ
ನ್ಯೂಯಾರ್ಕ್ : ಯುದ್ಧ ಎಂಬುದು ಭೀಕರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ, ಆದರೆ, ಕೆಲವು ದೇಶಗಳ, ನಾಯಕರ ಯುದ್ಧ ದಾಹಕ್ಕೆ ಆಗಾಗ, ವಿಶ್ವ ಯುದ್ಧಗಳಿಂದ ನಲುಗುತ್ತಲೇ ಇರುತ್ತದೆ.
ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಈವರೆಗೆ ಗಾಜಾದಲ್ಲಿ 10,000ಕ್ಕೂ ಅಧಿಕ ಪ್ಯಾಲೆಸ್ಟೈನ್ ಮಹಿಳೆಯರು ಹತ್ಯೆಗೀಡಾಗಿದ್ದಾರೆ. ಇವರಲ್ಲಿ ಅಂದಾಜು 6,000 ತಾಯಂದಿರು ಸೇರಿದ್ದಾರೆ. ಈ ಮಹಿಳೆಯರ ಸಾವಿನಿಂದ 19,000 ಮಕ್ಕಳು ಅನಾಥರಾಗಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.
ವರದಿಯ ಪ್ರಕಾರ ಇಸ್ರೇಲಿ ಬಾಂಬ್ ದಾಳಿಯಿಂದ ಮತ್ತು ಮತ್ತಿತರ ಯುದ್ಧ ಕಾಯರ್ಾಚರಣೆಗಳಿಂದ ಬದುಕುಳಿದ ಬಹುತೇಕ ಮಹಿಳೆಯರು ತಾವಿದ್ದ ಸ್ಥಳದಿಂದ ಸ್ಥಳಾಂತರಗೊಂಡಿದ್ದಾರೆ, ಕೆಲವರು ವಿಧವೆಯರಾಗಿದ್ದಾರೆ ಮತ್ತು ಕೆಲವರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಇದು ಗಾಜಾ ಮೇಲೆ ನಡೆಯುತ್ತಿರುವ ಯುದ್ಧ ಎಂಬುದರ ಬದಲಾಗಿ ಮಹಿಳೆಯರ ಮೇಲಿನ ಯುದ್ಧವಾಗಿ ಮಾರ್ಪಟ್ಟಿದೆ ಎಂದು ವರದಿ ಉಲ್ಲೇಖಿಸಿದೆ.
ಒಂದು ದಶಲಕ್ಷಕ್ಕೂ ಹೆಚ್ಚು ಪ್ಯಾಲೆಸ್ಟೈನ್ ಮಹಿಳೆಯರು ಮತ್ತು ಬಾಲಕಿಯರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಅವರು ಆಹಾರ, ಸುರಕ್ಷಿತ ಕುಡಿಯುವ ನೀರು, ಶೌಚಾಲಯಗಳು ಅಥವಾ ಹರಿಯುವ ನೀರಿನ ಲಭ್ಯತೆ ಇಲ್ಲದೆ ಮಾರಣಾಂತಿಕ ಅಪಾಯಗಳನ್ನು ಎದುರಿಸುತ್ತಿದ್ದಾರೆ. ಗಾಜಾದ 6,90,000 ಮಹಿಳೆಯರು ಮತ್ತು ಬಾಲಕಿಯರಿಗೆ ಪ್ರತಿ ತಿಂಗಳು 10 ಮಿಲಿಯನ್ ಡಿಸ್ಪೋಸಬಲ್ ಸ್ಯಾನಿಟರಿ ಪ್ಯಾಡ್ಗಳು ಅಥವಾ ನಾಲ್ಕು ಮಿಲಿಯನ್ ಮರುಬಳಕೆ ಮಾಡಬಹುದಾದ ಸ್ಯಾನಿಟರಿ ಪ್ಯಾಡ್ಗಳು ಬೇಕಾಗುತ್ತವೆ ಎಂದು ಯುಎನ್ ವುಮೆನ್ ಸಂಸ್ಥೆ ಅಂದಾಜಿಸಿದೆ.
ಸಂಸ್ಥೆ ತಯಾರಿಸಿದ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗೆಗಿನ ಸರಣಿ ವರದಿ ಗಾಜಾ ಪಟ್ಟಿಯ ಮಹಿಳೆಯರು ಮತ್ತು ಬಾಲಕಿಯರ ಜೀವನದ ವಾಸ್ತವಿಕ ಅಸಹ್ಯಕರ ಜೀವನ ಪರಿಸ್ಥಿತಿಗಳನ್ನು ದಾಖಲಿಸಿದೆ. ಮಹಿಳೆಯರ ಆರೋಗ್ಯ, ಘನತೆ, ಸುರಕ್ಷತೆ ಮತ್ತು ಗೌಪ್ಯತೆಗೆ ಅತ್ಯಗತ್ಯವಾದ ನೀರು, ನೈರ್ಮಲ್ಯ ಸೇವೆಗಳ ಲಭ್ಯತೆಯ ಕೊರತೆ ಬಗ್ಗೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಗಾಜಾದ ಸುಮಾರು 1 ಲಕ್ಷಕ್ಕೂ ಅಧಿಕ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಯುಎನ್ ವುಮೆನ್ ಸಂಸ್ಥೆಯು ಆಹಾರ, ಕಂಬಳಿ, ಚಳಿಗಾಲದ ಬಟ್ಟೆಗಳು, ಸಾಬೂನು, ಡೈಪರ್ಗಳು ಮತ್ತು ಸ್ಯಾನಿಟರಿ ಕಿಟ್ಗಳನ್ನು ಪೂರೈಸಿದೆ. ಆದರೆ ಇದು ಗಾಜಾದ ಮಹಿಳೆಯರಿಗೆ ಅಗತ್ಯವಿರುವ ಸೌಲಭ್ಯಗಳಿಗೆ ಹೋಲಿಸಿದರೆ ಚಿಕ್ಕ ಪ್ರಮಾಣವಾಗಿದೆ