ಧಾರವಾಡ, (ಏಪ್ರಿಲ್ 16): ಲೋಕಸಭಾ ಚುನಾವಣೆ ಹಿನ್ ನೆಲೆಯಲ್ಲಿ ಝಣ ಝಣ ಕಾಂಚಾಣ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಸಹ ಎಲ್ಲೆಡೆ ಜಾಲಾಡುತ್ತಿದ್ದಾರೆ. ಅದರಂತೆ ಇಂದು (ಏಪ್ರಿಲ್ 16) ಧಾರವಾಡದಲ್ಲಿ ಐಟಿ ಭರ್ಜರಿ ಬೇಟೆಯಾಡಿದ್ದು, ಒಂದೇ ಫ್ಲ್ಯಾಟ್ನಲ್ಲಿ ಬರೋಬ್ಬರಿ 18 ಕೋಟಿ ರೂ. ಹಣ ಜಪ್ತಿ ಮಾಡಿದೆ. ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯ ಅರ್ನಾ ರೆಸಿಡೆನ್ಸಿಯ 3ನೇ ಮಹಡಿಯಲ್ಲಿರುವ ಬಸವರಾಜ್ ದತ್ತನವರ್ ಎಂಬುವರಿಗೆ ಸೇರಿದ ಪ್ಲಾಟ್ ನಂ. 303ರ ನಿವಾಸದ ಮೇಲೆ ದಾಳಿ ಐಡಿ ಅಧಿಕಾರಿಗಳು ದಾಳಿ ಮಾಡಿದ್ದು, ಬರೋಬ್ಬರಿ 18 ಕೋಟಿ ರೂ. ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಮದ್ಯ ಸಂಗ್ರಹ ಇದೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ಮನೆಗಳಲ್ಲಿದ್ದ ಎಲ್ಲಾ ಚೀಲಗಳನ್ನು ಪರಿಶೀಲನೆ ಮಾಡಿದ್ದಾರೆ. ಆದ್ರೆ, ಚೀಲಗಳಲ್ಲಿ ಏನೂ ಸಿಗದಿದ್ದಾಗ ಕೊನೆಗೆ ತಿಜೋರಿ ಓಪನ್ ಮಾಡಿದ್ದಾರೆ. ಆಗ ತಿಜೋರಿಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ಸುಮಾರು 6 ವಾಹನಗಳಲ್ಲಿ ಬಂದ 20ಕ್ಕೂ ಅಧಿಕಾರಿಗಳು ದಾಳಿ ಮಾಡಿದ್ದು, 18 ಕೋಟಿ ರೂ. ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಹಣ ಯಾರದ್ದು? ಇಷ್ಟೊಂದು ಹಣ ಎಲ್ಲಿಂದ ಬಂತು? ಯಾಕಾಗಿ ಇಷ್ಟೊಂದು ಶೇಖರಣೆ ಮಾಡಿಕೊಂಡಿದ್ಯಾಕೆ? ಎಂದು ಹಣ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಟಿ ಮೂಲಗಳು ತಿಳಿಸಿವೆ.
ಮೊನ್ನೆ ಅಷ್ಟೇ ಐಟಿ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂ. ಗೂ ಹೆಚ್ಚು ನಗದು ಸಿಕ್ಕಿತ್ತು. ನಿಂಗಪ್ಪ ಜಟಾದ್ ಎಂಬುವವರ ಮನೆಯಲ್ಲಿ ಪತ್ತೆಯಾಗಿದ್ದ 2 ಕೋಟಿ ರೂ. ಹೆಚ್ಚು ನಗದು ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.