ಬೆಂಗಳೂರು: ನ್ಯಾಯಾಲಯಗಳಲ್ಲಿ ಪಾರದರ್ಶಕತೆ ತರಬೇಕು, ಎಲ್ಲಾ ಕೋರ್ಟ್ ಕಲಾಪಗಳನ್ನು ಸಾರ್ವಜನಿಕಗೊಳಿಸಲು ಲೈವ್ ಸ್ಟ್ರೀಮಿಂಗ್ ಮಾಡಬೇಕು ಹಾಗೂ ಕೋರ್ಟ್ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿ ವಕೀಲರೊಬ್ಬರು ಏಕಾಂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ವಕೀಲ ಕೆ.ಎಸ್ ಅನಿಲ್ ಕುಮಾರ್ ನ್ಯಾಯಾಲಯಗಳಲ್ಲಿ ಪಾದರ್ಶಕತೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದೇ ಏಪ್ರಿಲ್ 1ರಿಂದ ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸ್ವತಂತ್ರ ಉದ್ಯಾನವನದ ಮುಂಭಾಗದಲ್ಲಿ ಕುಳಿತು ಹಗಲಿರುಳು ಲೆಕ್ಕಿಸದೆ ಹೋರಾಟ ಮುಂದುವರೆಸಿದ್ದಾರೆ.
ಕಳೆದ 16 ದಿನಗಳಿಂದ ನೀರಿನ ಹೊರತಾಗಿ ಮತ್ತೇನೂ ಸೇವಿಸದ ವಕೀಲ ಕೆ.ಎಸ್ ಅನಿಲ್ ಕುಮಾರ್ ಆರೋಗ್ಯ ದಿನ ಕಳೆದಂತೆ ಹದಗೆಡುತ್ತಿದೆ. ಸತ್ಯಾಗ್ರಹ ಕೈಗೊಂಡಿರುವ ವಕೀಲರನ್ನು ಪ್ರತಿನಿತ್ಯವೂ ವೈದ್ಯಾಧಿಕಾರಿಗಳು ಪರೀಕ್ಷಿಸುತ್ತಿದ್ದು, ಅವರ ಆರೋಗ್ಯ ಸ್ವಲ್ಪಮಟ್ಟಿಗೆ ಹಳಿ ತಪ್ಪಿದೆ ಎಂದಿದ್ದಾರೆ.
ತಮ್ಮ ಪ್ರತಿಭಟನಾ ಸತ್ಯಾಗ್ರಹ ಕುರಿತಂತೆ ಪ್ರತಿಕ್ರಿಯಿಸಿರುವ ವಕೀಲ ಕೆ.ಎಸ್ ಅನಿಲ್ ಕುಮಾರ್, ರಾಜ್ಯದ ಎಲ್ಲ ನ್ಯಾಯಾಲಗಳಲ್ಲಿ ಪಾರದರ್ಶಕತೆ ತರಲು ಎಲ್ಲ ಕೋರ್ಟ್ ಕಲಾಪಗಳನ್ನು ಸಾರ್ವಜನಿಕವಾಗಿ ಲೈವ್ ಸ್ಟ್ರೀಮಿಂಗ್ ಮಾಡಬೇಕು. ನ್ಯಾಯಾಲಯಗಳ ಪ್ರತಿ ಕಚೇರಿಯಲ್ಲೂ ಸಿಸಿಟಿವಿ ಅಳವಡಿಸಬೇಕು. ಅದಕ್ಕಾಗಿ ಈ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ ಹಾಗೂ ಈ ಹೋರಾಟವನ್ನು ಮುಂದುವರೆಸುತ್ತೇನೆ ಎಂದರು. ಅಲ್ಲದೇ, ಸರ್ಕಾರ ಲೈವ್ ಸ್ಟ್ರೀಮಿಂಗ್ ಮತ್ತು ಸಿಸಿಟಿವಿ ಅಳವಡಿಸಿಕೆಗೆ ಅಗತ್ಯ ಹಣ ನೀಡಲು ಸಿದ್ದವಿದ್ದರೂ ನ್ಯಾಯಾಲಯಗಳಲ್ಲಿ ಈ ಪಾರದರ್ಶಕತೆ ಜಾರಿಗೆ ಮೀನಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿದರು.