ಹುಬ್ಬಳ್ಳಿ: ಕರ್ನಾಟಕದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿ ಮತ್ತೊಂದು ಪ್ರೇಮವೈಫಲ್ಯದ ಕೊಲೆ ಪ್ರಕರಣಕ್ಕೆ ಸಾಕ್ಷಿಯಾಗಿದೆ. ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಯುವತಿಯ ಕೊಲೆಯಾಗಿದೆ.
ಕಳೆದ ಕೆಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ 21 ವರ್ಷದ ಯುವಕ ವಿಶ್ವ ಆಲಿಯಾಸ್ ಗಿರೀಶ್ ಸಾವಂತ, ವೀರಾಪುರ ಗುಡಿ ಓಣಿ ನಿವಾಸಿಯಾದ 20 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು, ಮನೆಗೆ ನುಗ್ಗಿ ಕುಟುಂಬಸ್ಥರ ಮುಂದೆಯೇ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ವಿಶ್ವ, ಪದೇ ಪದೇ ಎಲ್ಲಿಗಾದರೂ ತನ್ನೊಂದಿಗೆ ಬರುವಂತೆ ಕರೆಯುತ್ತಿದ್ದ. ನಿರಾಕರಿಸಿದ್ದಕ್ಕೆ, ನೇಹಾ ಮಾದರಿಯಲ್ಲಿ ಸಾಯಿಸುತ್ತೇನೆ ಎಂದು ಹಿಂದೆಯೇ ಬೆದರಿಸಿದ್ದ ಎನ್ನಲಾಗಿದೆ. ಬುಧವಾರ ಬೆಳಗಿನ ಜಾವ ಮನೆಯ ಹೊರಗೆ ಬಂದ ಯುವಕ ವಿಶ್ವ, ಆಕೆಯನ್ನು ಮನೆಯಿಂದ ಹೊರಗೆ ಕರೆದಿದ್ದಾನೆ. ತನ್ನೊಂದಿಗೆ ಬರುವಂತೆ ಪೀಡಿಸಿದ್ದಾನೆ.
ಆಕೆ ಆತನೊಂದಿಗೆ ಹೋಗಲು ನಿರಾಕರಿಸಿ, ಅಜ್ಜಿ ಮತ್ತು ತಂಗಿಯನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ವಿಶ್ವ, ಚಾಕುವಿನಿಂದ ಎದೆ, ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಪೊಲೀಸರು, ತನಿಖೆ ಆರಂಭಿಸಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ನಡುವೆ ಕುಟುಂಬಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಪದೇಪದೆ ಇಂತಹ ಪ್ರಕರಣ ಹೆಚ್ಚಾಗಲು, ಸರಕಾರದ ನಿಷ್ಕ್ರಿಯತೆ ಕಾರಣ ಎಂದು ಆರೋಪಿಸಿದ್ದಾರೆ.