ಬೆಂಗಳೂರು: ಆನ್ಲೈನ್ ಜಾಹೀರಾತು ವೀಕ್ಷಣೆ ಮೂಲಕ ಹಣಗಳಿಸುವ ಯೋಜನೆಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಮೆ.ಜಾ ಲೈಫ್ಸ್ಟೈಲ್ ಇಂಡಿಯಾ ಪ್ರೈ.ಲಿ. ಸಂಸ್ಥೆ ಬ್ಯಾಂಕ್ ಖಾತೆಗಳಲ್ಲಿದ್ದ 3.70 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕ ಜಪ್ತಿ ಮಾಡಿದೆ.
ಈ ಕುರಿತು ಇಡಿ ಪ್ರಕಣೆಯಲ್ಲಿ ಮಾಹಿತಿ ನೀಡಿದೆ. ಮೆ.ಜಾ. ಲೈಫ್ಸ್ಟೈಲ್ ಇಂಡಿಯಾ ಪ್ರೈ.ಲಿ. ಮತ್ತು ಇತರರು ಸಂಸ್ಥೆಯ ನಿರ್ದೇಶಕರ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ. ತನಿಖೆ ಆರಂಭಿಸಿತ್ತು. ಈ ಸಂಸ್ಥೆ ಸದಸ್ಯರನ್ನು ನೋಂದಾಯಿಸಲು ಮತ್ತು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು ಸದಸ್ಯತ್ವ ಆಧಾರಿತ ಮಾದರಿ ಅಳವಡಿಸಿಕೊಂಡಿರುವುದು ಇಡಿ ತನಿಖೆಯಿಂದ ತಿಳಿದು ಬಂದಿದೆ.
ಸಂಭಾವ್ಯ ವ್ಯಕ್ತಿಗಳನ್ನು ವಾಟ್ಸಾಪ್ ಮತ್ತು ಇತರ ಆನ್ಲೈನ್ ಸಂವಹನ ಮಾರ್ಗಗಳ ಮೂಲಕ ಸಂಪರ್ಕಿಸಿದೆ. ಕಂಪೆನಿ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಜಾಹೀರಾತು-ವೀಕ್ಷಣೆ ಕಾರ್ಯಕ್ರಮದ ಕುರಿತು ಈ ಮೂಲಕ ಮಾಹಿತಿ ನೀಡಿತ್ತು. ಆಸಕ್ತರಿಗೆ ಕಂಪೆನಿಯ ವೆಬ್ ಪ್ಲಾಟ್ಫಾರ್ಮ್ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಲು ಲಿಂಕ್ ಒದಗಿಸಲಾಗುತ್ತಿತ್ತು. ಅಲ್ಲಿ ಲಾಗಿನ್ ವಿವರಗಳನ್ನು ರಚಿಸಬೇಕಿತ್ತು.
ತರುವಾಯ, ಶಾಶ್ವತ ಸದಸ್ಯತ್ವ ಪಡೆಯಲು ಮತ್ತು ಕಂಪೆನಿಯ ಆದಾಯ ಗಳಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹತೆ ಪಡೆಯುವ ಸಲುವಾಗಿ, ಸದಸ್ಯರು ಈ ಸಂಸ್ಥೆಯ ಬ್ಯಾಂಕ್ ಖಾತೆಗೆ 1,109 ರೂ.ಗಳ (ಜಿಎಸ್ಟಿ ಒಳಗೊಂಡಂತೆ) ಪಾವತಿಸಬೇಕಿತ್ತು. ಪ್ರಸ್ತುತ ಪ್ರಕರಣದಲ್ಲಿ, ಸಂಸ್ಥೆಯು 2020 ಡಿ.6 ರಿಂದ 2021ರ ಜೂ.4 ರ ಅವಧಿಯಲ್ಲಿ ಸಾರ್ವಜನಿಕರಿಂದ ಸುಮಾರು 4.29 ಕೋಟಿ ರೂ. ಸಂಗ್ರಹಿಸಿದೆ.
ಇದಲ್ಲದೆ, ಜಾಹೀರಾತುಗಳನ್ನು ವೀಕ್ಷಿಸುವ ಮೂಲಕ ಹಣಗಳಿಸುವ ಅಂತಹ ಯಾವುದೇ ಸೌಲಭ್ಯವನ್ನು ಕಂಪನಿ ಒದಗಿಸಿರಲಿಲ್ಲ. ಬದಲಾಗಿ, ಸಂಗ್ರಹಿಸಿದ ಹಣವನ್ನು ಕಂಪನಿ ನಿರ್ದೇಶಕರ ವೈಯಕ್ತಿಕ ವೆಚ್ಚಗಳು ಅಥವಾ ಲಾಭಗಳಿಗಾಗಿ ಬಳಸಿಕೊಳ್ಳಲಾಗಿದೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ಪ್ರಕಟಣೆ ತಿಳಿಸಿದೆ.

