ಆನ್‌ಲೈನ್‌ನಲ್ಲಿ ಗುಟ್ಕಾ ತರಿಸಿಕೊಳ್ಳುವಂತಿಲ್ಲ: ಇದು ಆರೋಗ್ಯ ಇಲಾಖೆ ಆದೇಶ
ಬೆಂಗಳೂರು: ಆನ್‌ಲೈನ್ ಗುಟ್ಕಾ ಮಾರಾಟದ ಮೇಲೆ ನಿರ್ಬಂಧ ಹಾಕುವಂತೆ ಆರೋಗ್ಯ ಇಲಾಖೆ ಸೈಬರ್ ಪೊಲೀಸರಿಗೆ ಪತ್ರ ಬರೆದಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಗುಟ್ಕಾ ತಿನ್ನುವವರು, ಆನ್‌ಲೈನ್‌ನಲ್ಲಿ ತರಿಸಿಕೊಂಡು ತಿಂದರೆ ಮಾತ್ರವೇ ಅನಾರೋಗ್ಯಕ್ಕೆ ಒಳಗಾಗ್ತಾರಾ? ಅಂಗಡಿಗಳಲ್ಲಿ ಮಾರಾಟ ಮಾಡುವ ಗುಟ್ಕಾ ತೆಗೆದುಕೊಂಡು ಸೇವಿಸಿದರೆ ಏನೂ ಆಗೋದಿಲ್ವಾ? ಅದ್ಯಾಕೆ ಇಂತಹ ಯಡವಟ್ಟು ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳುತ್ತದೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಹಾಗಂತ ಆನ್‌ಲೈನ್ ಗುಟ್ಕಾ ಮಾರಾಟಕ್ಕೆ ಅವಕಾಶ ಮಾಡಿಕೊಡಿ ಎಂಬುದು ನಮ್ಮ ವಾದವಲ್ಲ, ಆದರೆ, ಅಂಗಡಿಗಳಲ್ಲಿ ಮಾರಾಟವಾಗುವ ಗುಟ್ಕಾಗೂ ಕಡಿವಾಣ ಹಾಕಬೇಕು ಎಂದು ಕೆಲವರು ವಾದಿಸಿದ್ದಾರೆ. ಸರಕಾರ ಮಾರಾಟ ಮಾಡದಂತೆ ನಿಷೇಧ ಏರುವ ನಾಟಕ ಮಾಡುವ ಬದಲು ತಯಾರು ಮಾಡುವವರ ಮೇಲೆಯೇ ಕ್ರಮ ತೆಗೆದುಕೊಂಡು, ಗುಟ್ಕಾ ತಯಾರಿಸದಂತೆ ನಿಷೇಧ ಏರಿದರೆ ಸಾಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತಯಾರಿಕೆಯನ್ನೇ ನಿಲ್ಲಿಸಿದರೆ, ಮಾರಾಟ ಮಾಡುವುದೆಲ್ಲಿ ಬಂತು? ತಯಾರಿಕೆ ಮಾಡುವವರು ಶ್ರೀಮಂತರು, ಮಾರಾಟ ಮಾಡುವವರು ಸಣ್ಣ ವ್ಯಾಪಾರಿಗಳು, ನೀವು ದೊಡ್ಡವರಿಗೆ ಏನು ತೊಂದರೆ ಮಾಡದೆ, ಜೀವನೋಪಾಯಕ್ಕಾಗಿ ಮಾರಾಟ ಮಾಡಿ ಅಷ್ಟೋ ಇಷ್ಟೋ ಸಂಪಾದನೆ ಮಾಡುವವರ ಹೊಟ್ಟೆ ಮೇಲೆ ಹೊಡೆಯುತ್ತೀರಿ, ಅದರ ಬದಲು ಯಾವುದೇ ತಂಬಾಕು ವಸ್ತುಗಳ ತಯಾರಿಕೆಯನ್ನೇ ನಿಷೇಧ ಮಾಡಿ. ಗುಟ್ಕಾ ತಯಾರಿಸುವ ಎಲ್ಲ ಕಂಪನಿಗಳನ್ನು ಮುಚ್ಚಿಸಿಬಿಡಿ ಎಂದು ಕಿಡಿಕಾರಿದ್ದಾರೆ.