ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ 5ನೇ ಬಾರಿ ಕಣಕ್ಕೆ
–ಧಾರವಾಡದಲ್ಲಿ ಜೋಶಿ ಪರ ಬೃಹತ್ ಮೆರವಣಿಗೆ: ರಾಜ್ಯ ನಾಯಕರು ಸಾಥ್
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಂದು ನಾಮಪತ್ರ ಸಲ್ಲಿಸಿದರು.
ಮಾಜಿ ಸಿಎಂ ಬಿಎಸ್ ವೈ ಮತ್ತು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಸಾಗಿದ ಜೋಶಿ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ದಿವ್ಯಾ ಪ್ರಭು ಅವರಿಗೆ ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಮಾಜಿ ಸಂಸದ ವಿಜಯ ಸಂಕೇಶ್ವರ, ಪ್ರಭಾಕರ್ ಕೋರೆ, ಮಾಜಿ ಸಚಿವ ಸಿಸಿ ಪಾಟೀಲ ಹಾಗೂ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ ತೆಂಗಿನಕಾಯಿ, ಎಂ.ಆರ್. ಪಾಟೀಲ್ ಸಾಥ್ ನೀಡಿದರು.
ದೇವಸ್ಥಾನ-ಮಠಕ್ಕೆ ಭೇಟಿ : ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿ ಹುಬ್ಬಳ್ಳಿ-ಧಾರವಾಡದ ವಿವಿಧ ಮಠ- ಮಾನ್ಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಶ್ರೀಗಳ ಆಶೀರ್ವಾದ ಪಡೆದರು. ಹುಬ್ಬಳ್ಳಿ ಸಿದ್ಧಾರೂಢ ಮಠ, ಮುರುಸಾವಿರ ಮಠ, ಧಾರವಾಡ ಮುರುಘಾ ಮಠ, ಭವಾನಿ ನಗರ ಮತ್ತು ನವನಗರದ ರಾಘವೇಂದ್ರ ಸ್ವಾಮಿ ಮಠಗಳಿಗೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಅಲ್ಲದೇ, ನಾಗಶೆಟ್ಟಿಕೊಪ್ಪದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಧಾರವಾಡ ಲಕ್ಷ್ಮಿನರಸಿಂಹ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಜೋಶಿ ಅವರನ್ನು ಆಶೀರ್ವದಿಸಿ, ಶುಭ ಹಾರೈಸಿದರು. ವರಿಷ್ಟರೊಂದಿಗೆ ಬೃಹತ್ ಮೆರವಣಿಗೆ: ದೇವಸ್ಥಾನ-ಮಠಗಳ ಭೇಟಿ ಬಳಿಕ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಪಕ್ಷದ ವರಿಷ್ಟರೊಂದಿಗೆ ಧಾರವಾಡದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆ ಆರಂಭಿಸಿದರು.
ಪ್ರಮುಖ ಬೀದಿಗಳಲ್ಲಿ ಸಾಗಿದ ಬೃಹತ್ ಮೆರವಣಿಗೆಯಲ್ಲಿ ಹುಬ್ಬಳ್ಳಿ-ಧಾರವಾಡ, ಶಿಗ್ಗಾವಿ-ಸವಣೂರು ಸೇರಿದಂತೆ ಕ್ಷೇತ್ರದ ವಿವಿಧೆಡೆಯಿಂದ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು. ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸಹ ಪಾಲ್ಗೊಂಡು ಮೈತ್ರಿಕೂಟದ ಬಲ ಪ್ರದರ್ಶಿಸಿದರು.