ಅಪರಾಧ ರಾಜಕೀಯ ಸುದ್ದಿ

ಪೆನ್ ಡ್ರೈವ್ ಇಟ್ಟುಕೊಂಡಿದ್ದ ಪ್ರೀತಂಗೌಡ ಆಪ್ತರು ಎಸ್ಐಟಿ ವಶಕ್ಕೆ!

Share It

ಹಾಸನ, ಮೇ 12: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್​ ಗೌಡ ಮತ್ತು ಕಚೇರಿಯ ಸಿಬ್ಬಂದಿ ಚೇತನ್​​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಎಸ್ಐಟಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳು ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿದ್ದಂತೆ ಕಳೆದ ತಿಂಗಳು ಏಪ್ರಿಲ್ 23 ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ತನಿಖೆಗಾಗಿ ರಾಜ್ಯಸರ್ಕಾರ ಎಸ್ಐಟಿ ರಚಿಸಿತು.

ಬಳಿಕ ಪ್ರಕರಣ ಎಸ್​ಐಟಿಗೆ ವರ್ಗಾವಣೆಯಾಯಿತು. ನಂತರ ಎಸ್​ಐಟಿ ಹಲವು ತಂಡಗಳನ್ನು ರಚಿಸಿಕೊಂಡು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ. ಸದ್ಯ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತಂಡ ಹಾಸನದಲ್ಲಿ ಬೀಡು ಬಿಟ್ಟಿದೆ. ಈ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರನ್ನು ವಶಕ್ಕೆ ಪಡೆದುಕೊಳ್ಳುತ್ತಿದೆ. ಇದೀಗ ಅಧಿಕಾರಿಗಳು ಮಾಜಿ ಶಾಸಕ ಪ್ರೀತಂಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್​ ಹಾಗೂ ಆಪ್ತ ಲಿಖಿತ್​ ಗೌಡನನ್ನು ಪೆನ್ ಡ್ರೈವ್ ಇಟ್ಟುಕೊಂಡಿದ್ದ ಆರೋಪದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ.

ಲಿಖಿತ್ ಗೌಡ ಮತ್ತು ಚೇತನ್​ ಮಾಜಿ ಶಾಸಕ ಪ್ರೀತಂಗೌಡ ಜೊತೆ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಸದ್ಯ ಹಾಸನ ನಗರ ಪೊಲೀಸ್​ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ಜಾಲಾಡುತ್ತಿದ್ದಾರೆ. ಇನ್ನು ಈ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯನ್ನು ಕುದುರೆಮುಖ ಠಾಣೆ ಪೊಲೀಸರು ಬಂಧಿಸಿದ್ದರು.

ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್, ಬಂಧಿತ ಆರೋಪಿ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪ್ರಜ್ವಲ್​ ರೇವಣ್ಣ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದಾನೆ.


Share It

You cannot copy content of this page