ಹಾಸನ : ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ. ವಕೀಲ ದೇವರಾಜೇಗೌಡ ವಿರುದ್ಧದ ಅತ್ಯಾಚಾರ ಪ್ರಕರಣ ಜೊತೆಗೆ ಹಲವು ಹಳೆ ಕೇಸ್ಗಳನ್ನು ಎಸ್ಐಟಿ ಅಧಿಕಾರಿಗಳು ರೀ ಓಪನ್ ಮಾಡಿದ್ದಾರೆ.
ದೇವರಾಜೇಗೌಡ ವಿರುದ್ಧ ಚೀಟಿಂಗ್ ಕೇಸ್ ಸೇರಿ 5ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣ ಜೊತೆಗೆ ಹಳೇ ಪ್ರಕರಣಗಳ ತನಿಖೆಯೂ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ದೇವರಾಜೇಗೌಡರನ್ನು ಎಸ್ಐಟಿ ಅಧಿಕಾರಿಗಳು ಸೋಮವಾರ (ಮೇ13) ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಮಾ. 14 ರಂದು ದೇವರಾಜೇಗೌಡ ವಿರುದ್ಧ ಜಿಲ್ಲಾಧಿಕಾರಿ ಸತ್ಯಭಾಮ ಹಾಸನ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾಧಿಕಾರಿಗಳ ದೂರು ಆಧರಿಸಿ ಹಾಸನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಸಲಾಗಿತ್ತು.
ನಂತರ ಮಾರ್ಚ್ 29 ರಂದು ವ್ಯಕ್ತಿಯೊಬ್ಬರಿಂದ ಹೊಳೆನರಸೀಪುರ ನಗರ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿ, ಜಾತಿ ನಿಂದನೆ, ಲೈಂಗಿಕ ಕಿರುಕುಳ, ಅತ್ಯಾಚಾರ ಆರೋಪ ಸೇರಿದಂತೆ ಹಲವು ಪ್ರಕರಣಗಳ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ತನ್ನ ವಿರುದ್ಧ ಅತ್ಯಾಚಾರ ಆರೋಪ ಬರುತ್ತಿದ್ದಂತೆ ದೇವರಾಜೇಗೌಡ ರಾಜ್ಯದಿಂದ ಪರಾರಿಯಾಗಲು ಯತ್ನಿಸಿದ್ದರು. ಆದರೆ ಚಿತ್ರದುರ್ಗ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರವಾಸ ಎಂದು ಹೇಳಿ ದೇವರಾಜೇಗೌಡ ಹಿರಿಯೂರಿನಿಂದ ಪುಣೆಗೆ ತೆರಳಿ ಅಲ್ಲಿಂದ ದೆಹಲಿಗೆ ಹೋಗಲು ನಿರ್ಧರಿಸಿದ್ದನು. ದೆಹಲಿಯಲ್ಲಿ ಮಹಾನಾಯಕರ ಭೇಟಿಯಾಗಲು ಯೋಚಿಸಿದ್ದನು.
ಎರಡು ಟ್ರಾಲಿ ಬ್ಯಾಗ್, ಒಂದು ಮೊಬೈಲ್ ಮತ್ತು ಆಡಿಯೋ, ವಿಡಿಯೋಗಳ ಸಮೇತ ಹಲವು ದಾಖಲೆಗಳನ್ನು ಇಟ್ಟುಕೊಂಡು ದೆಹಲಿ ಹೋಗುತ್ತಿದ್ದನು. ಆದರೆ ಚಿತ್ರದುರ್ಗ ಪೊಲೀಸರು ಆತನ ಮೊಬೈಲ್ ಲೊಕೇಶನ್ ಆಧರಿಸಿ ಕೂಡಲೇ ಬಂಧಿಸಿದ್ದಾರೆ. ದೆಹಲಿಯಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸಲು ನಿರ್ಧರಿಸಿದ್ದನು ಮತ್ತು ಅಲ್ಲಿಯೇ ಕರ್ನಾಟಕದ ಕೆಲ ರಾಜಕಾರಣಿಗಳ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆಗೆ ಮಾಡಲು ಪ್ಲಾನ್ ಮಾಡಿದ್ದನು. ದೇವರಾಜೇಗೌಡ ಬಂಧನ ವೇಳೆ ಆತನ ಕಾರಿನಲ್ಲಿ ಒಂದು ಮೊಬೈಲ್ ಪತ್ತೆಯಾಗಿದೆ.
ಮೊಬೈಲ್ ಪರಿಶೀಲನೆ ವೇಳೆ ಹಲವು ಆಡಿಯೋ ದಾಖಲೆಗಳು ಸಿಕ್ಕಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿವರಾಮೇಗೌಡ, ಕಾರ್ತಿಕ್ ಗೌಡ ಸೇರಿ ಹಲವರ ಸಂಭಾಷಣೆ ಆಡಿಯೋಗಳು ಪತ್ತೆಯಾಗಿವೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ. ಪೊಲೀಸರು ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜಕೀಯ ಷಡ್ಯಂತ್ರ: ಅಶ್ಲೀಲ ವೀಡಿಯೋ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ತಮ್ಮ ಕಕ್ಷಿದಾರರನ್ನು ಬಂಧಿಸಲಾಗಿದೆ. ಇದು ರಾಜಕೀಯ ಷಡ್ಯಂತ್ರ ಎಂದು ದೇವರಾಜೇಗೌಡ ಪರ ವಕೀಲರು ಆರೋಪಿಸಿದ್ದಾರೆ. ಡಿ.ಕೆ ಶಿವಕುಮಾರ್ ವಿರುದ್ಧ ಮಾತಾಡಿದ್ದಕ್ಕೆ ದೇವರಾಜೇಗೌಡ ಜೈಲು ಸೇರಿದರಾ? ಎಂಬ ಅನುಮಾನ ಶುರುವಾಗಿದೆ. ಹಳೆ ಕೇಸ್ಗೆ ಮತ್ತೊಂದು ಸೆಕ್ಷನ್ ಸೇರಿಸಿ ದೇವರಾಜೇಗೌಡ ಅವರನ್ನು ಬಂಧಿಸಲಾಗಿದೆ.
ಮೂಲ ದೂರಿನಲ್ಲಿ ಅತ್ಯಾಚಾರ ಅಂತ ದಾಖಲಾಗಿಲ್ಲ. ಆದರೆ, ಈ ದೂರು ನೀಡಿ ತಿಂಗಳ ಬಳಿಕ ಅತ್ಯಾಚಾರ ಸೇರ್ಪಡೆ ಮಾಡಲಾಗಿದೆ. ಏ.1 ರಂದು ದೇವರಾಜೇಗೌಡ ಮೇಲೆ ದಾಖಲಾಗಿದ್ದು ಜಾಮೀನು ಸಹಿತ ಪ್ರಕರಣಗಳು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಐಪಿಸಿ ಸೆ. 376(1) ಜಾಮೀನು ರಹಿತ ಸೆಕ್ಷನ್ ಸೇರ್ಪಡೆಯಾಗಿವೆ ಎಂದು ದೇವರಾಜೇಗೌಡ ಪರ ವಕೀಲರು ಹೇಳಿದ್ದಾರೆ.