ಉಪಯುಕ್ತ ಸುದ್ದಿ

ಮೇ ಕೊನೇ ವಾರದಲ್ಲೇ ರಾಜ್ಯಕ್ಕೆ ಬರಲಿದೆ ಮುಂಗಾರು ಮಳೆ!

Share It

ನವದೆಹಲಿ: ಬಿರು ಬಿಸಿಲಿನಿಂದ ಅಲೆಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಮೇ ತಿಂಗಳಲ್ಲೇ ದೇಶಕ್ಕೆ ಮುಂಗಾರು ಆಗಮನದ ಮುನ್ಸೂಚನೆ ನೀಡಿದೆ.

ನೈಋತ್ಯ ಮುಂಗಾರು ಮೇ 19ರೊಳಗೆ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಹೇಳಿದೆ.

ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮಹಾಪಾತ್ರ ಪ್ರಕಾರ, ನೈಋತ್ಯ ಮುಂಗಾರು 2 ಅಥವಾ 3 ದಿನ ಮುಂಚಿತವಾಗಿ ಆಗಮಿಸುವ ನಿರೀಕ್ಷೆಯಿದೆ.

ಮುಂಗಾರು ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಪ್ರವೇಸಿಸುತ್ತದೆ. ಇದಾದ ಬಳಿಕ ಸಾಮಾನ್ಯವಾಗಿ ಉತ್ತರದ ಕಡೆಗೆ ಚಲಿಸುತ್ತದೆ. ಜುಲೈ 15ರ ವೇಳೆಗೆ ಇಡೀ ದೇಶವನ್ನೇ ಆವರಿಸುತ್ತದೆ. ಈ ವರ್ಷದಲ್ಲಿ ದೇಶದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರೀಕ್ಷಿಸಿದೆ.

ಭಾರತೀಯ ಹವಾಮಾನ ಇಲಾಖೆಯು ಏಪ್ರಿಲ್ 15ರಂದು ತನ್ನ ಮುನ್ಸೂಚನೆಯಲ್ಲಿ ಜೂನ್​ನಿಂದ ಸೆಪ್ಟೆಂಬರ್​ ನಡುವೆ ದೇಶಾದ್ಯಂತ ಮುಂಗಾರು ಮಳೆಯು ಸುಮಾರು ಶೇ. 106ರಷ್ಟು ಸುರಿಯಲಿದೆ ಎಂದು ನಿರೀಕ್ಷಿಸಿದೆ. ಪ್ರಸ್ತುತ, ದೇಶದ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಏತನ್ಮಧ್ಯೆ, ಪ್ರಸ್ತುತ ಕರ್ನಾಟಕದ ಒಳ ಭಾಗಗಳಲ್ಲಿ ಚಂಡಮಾರುತದ ಪರಿಚಲನೆ ಇದೆ.

ಮುಂದಿನ 5 ದಿನಗಳಲ್ಲಿ ಮಧ್ಯಪ್ರದೇಶ, ವಿದರ್ಭ, ಛತ್ತೀಸ್‌ಗಢ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ (40ರಿಂದ 60 ಕಿಮೀ) ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಕೂಡ 5 ದಿನ ಮುಂಚಿತವಾಗಿಯೇ ಮಳೆ ಶುರುವಾಗಲಿದೆ. ಮೇ ಕೊನೆಯ ವಾರದಲ್ಲೇ ಕರ್ನಾಟಕದಲ್ಲಿ ಮುಂಗಾರು ಆರಂಭವಾಗಲಿದೆ.

ಗುಜರಾತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಬಂಧಿಸಿದಂತೆ, ಮೇ 14 (ಮಂಗಳವಾರ) ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಹಲವು ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಮಿಂಚು ಮತ್ತು ಬಲವಾದ ಗಾಳಿ ಬೀಸಬಹುದು.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಈ ದಿನ ಮಧ್ಯಪ್ರದೇಶದ ಅನೇಕ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯು ಸಂಭವಿಸಬಹುದು. ಇದಲ್ಲದೇ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ಇದೇ ಮೇ ತಿಂಗಳ ಕೊನೆಯ ವಾರದಲ್ಲೇ ಮುಂಗಾರು ಮಳೆ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ರೈತರು ಕಳೆದ ವರ್ಷ ಮಳೆಯಿಲ್ಲದೆ ದಾಖಲೆ ಬರಗಾಲ ಅನುಭವಿಸಿದ ಕಷ್ಟ ಕಾಲದಿಂದ ದೂರ ಆಗುವ ಕಾಲ ಸಮೀಪಿಸಿದೆ ಎಂದು ವಿಶ್ಲೇಷಿಸಬಹುದು.


Share It

You cannot copy content of this page