ನವದೆಹಲಿ : ಕಳೆದ ಒಂದು ವರ್ಷ ಟೊಮೆಟೋ, ಈರುಳ್ಳಿ ಇತ್ಯಾದಿ ಅಗತ್ಯ ಆಹಾರವಸ್ತುಗಳ ಬೆಲೆ ಏರಿಕೆ ಸಮಸ್ಯೆ ಒಂದರ ಬಳಿಕ ಮತ್ತೊಂದಂತೆ ಎದುರಾಗುತ್ತಲೇ ಇದೆ. ಕಳೆದ ವರ್ಷ ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ಈಗ ಬಹಳ ಕಡಿಮೆ ದರಕ್ಕೆ ಸಿಗುತ್ತಿದೆ. ಇನ್ನು ವಿಶ್ವದಾದ್ಯಂತ ಭಾರಿ ಬೆಲೆ ಏರಿಕೆಯಾಗಿದ್ದ ಟೊಮ್ಯಾಟೋ ಕೂಡ ಈಗ ಗಣನೀಯವಾಗಿ ಇಳಿದಿದೆ.
ಇಂಥ ವೇಳೆ ಆಲೂಗಡ್ಡೆ ಮಾತ್ರ ಬೆಲೆ ಏರಿಕೆಯ ಚಿಂತೆ ಶುರುವಾಗಿದೆ. ದೇಶಾದ್ಯಂತ ಬಿರುಬೇಸಿಗೆಯ ಮಧ್ಯೆ ನಡೆಯುತ್ತಿರುವ ಅಕಾಲಿಕ ಮಳೆಯ ಪರಿಣಾಮವಾಗಿ ಆಲೂಗೆಡ್ಡೆ ಬೆಳೆ ಇಳುವರಿ ಮೇಲೆ ಪರಿಣಾಮ ಬೀರುವ ಭೀತಿ ಇದೆ. ಆಲೂಗಡ್ಡೆ ವರ್ತಕರ ಪ್ರಕಾರ ಶೇ.10ರಷ್ಟು ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ.
ಉತ್ತರಪ್ರದೇಶ ದೇಶದಲ್ಲೇ ಅತಿಹೆಚ್ಚು ಆಲೂಗಡ್ಡೆ ಬೆಳೆಯುವ ರಾಜ್ಯ. ಆಗ್ರಾದಲ್ಲಿರುವ ಶೀತ ಸಂಗ್ರಹಾಗಾರಗಳಲ್ಲಿ ಹೆಚ್ಚಿನ ಮೊತ್ತದ ಆಲೂಗಡ್ಡೆಯ ಅಕ್ರಮ ಸಂಗ್ರಹ ಮಾಡಲಾಗಿದೆಯಾ? ಎಂಬುದನ್ನು ಉತ್ತರಪ್ರದೇಶ ಸರ್ಕಾರ ಪರಿಶೀಲಿಸುವ ಕೆಲಸ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಆಲೂಗಡ್ಡೆ ಸರಾಗವಾಗಿ ಹರಿದಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಉತ್ತರ ಭಾರತದ ಜನರು ಹೆಚ್ಚಾಗಿ ತಿನ್ನುವ ಚಪಾತಿಗೆ ಆಲೂಗಡ್ಡೆ ಪಲ್ಲೆಗೆ ಸಖತ್ ಡಿಮ್ಯಾಂಡ್ ಸದಾ ಇರುತ್ತದೆ.
ಕರ್ನಾಟಕದಲ್ಲೂ ಆಲೂಗಡ್ಡೆ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೊದಲಾದ ಕೆಲ ಜಿಲ್ಲೆಗಳಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಅತಿ ಬೇಸಿಗೆ ಮತ್ತು ಅಕಾಲಿಕ ಮಳೆ ಆಲೂಗಡ್ಡೆ ಬೆಳೆಯ ಉತ್ಪಾದನಾ ಪ್ರಮಾಣವನ್ನು ಕಡಿಮೆಗೊಳಿಸುವ ನಿರೀಕ್ಷೆ ಇದೆ.
ಅಲ್ಲದೇ ರಾಜ್ಯದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರವೇ ಆಲೂಗಡ್ಡೆ ಬೆಳೆಯುವುದು. ಅದೂ ಏಪ್ರಿಲ್ನಿಂದ ಸೆಪ್ಟಂಬರ್ವರೆಗಿನ ಮುಂಗಾರು ಋತುವಿನಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತದೆ. ಉತ್ತರಭಾರತದಲ್ಲಿ ಆಲೂಗಡ್ಡೆ ಬೆಲೆ ಏರಿಕೆಯಾದರೆ, ರಾಜ್ಯದ ಮಾರುಕಟ್ಟೆಯಲ್ಲೂ ಸಹಜವಾಗೇ ಆಲೂಗೆಡ್ಡೆ ಬೆಲೆ ಏರಿಕೆಯಾಗಲಿದೆ.
ಭಾರತದ ಆರ್ಥಿಕ ಓಟವನ್ನು ಜಗ್ಗುತ್ತಿರುವ ಆಹಾರ ವಸ್ತುಗಳು ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲೆಂದು ಬಡ್ಡಿದರವನ್ನು ಅಧಿಕ ಮಟ್ಟದಲ್ಲಿ ಮುಂದುವರಿಸಲಾಗುತ್ತಿದೆ. ಹಣದುಬ್ಬರ ದರ ಇಳಿಕೆಯ ಟ್ರೆಂಡ್ಗೆ ಬಂದಲ್ಲಿ ಬಡ್ಡಿದರ ಕಡಿತಗೊಳಿಸಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಕೊಡುವುದು ಆರ್ಬಿಐ ಎಣಿಕೆ. ಇದಾಗಬೇಕೆಂದರೆ ಹಣದುಬ್ಬರ ಇಳಿಯಬೇಕು. ಇದು ಇನ್ನೂ ಮೇಲ್ಮಟ್ಟದಲ್ಲೇ ಇದೆ. ಅದಕ್ಕೆ ಪ್ರಮುಖ ಕಾರಣವಾಗಿರುವುದು ಆಹಾರವಸ್ತುಗಳ ಬೆಲೆ.
ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಇತ್ಯಾದಿ ಅತ್ಯವಶ್ಯಕ ತರಕಾರಿ ಹಾಗೂ ಧಾನ್ಯ ಸೇರಿ ಎಲ್ಲಾ ರೀತಿಯ ಆಹಾರವಸ್ತುಗಳ ಬೆಲೆ ಹೆಚ್ಚಿನ ಮಟ್ಟದಲ್ಲೇ ಇರುವುದು ದೇಶದ ಹಣದುಬ್ಬರ ಇಳಿಕೆಗೆ ಹಿನ್ನಡೆಯಾಗಿದೆ.