ಅಪರಾಧ ರಾಜಕೀಯ ಸುದ್ದಿ

ಬಿ. ವೈ.ರಾಘವೇಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಕೆ.ಎಸ್.ಈಶ್ವರಪ್ಪ ದೂರು

Share It

ಬೆಂಗಳೂರು: ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರು ತನ್ನ ವಿರುದ್ಧ ಅಪಪ್ರಚಾರ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವರೆಂದು ರಾಜ್ಯ ಚುನಾವಣಾ ಆಯೋಗಕ್ಕೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ದೂರು ಸಲ್ಲಿಸಿದ್ದಾರೆ.

ಬಳಿಕ ಕೆ.ಎಸ್ ಈಶ್ವರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ದೂರಿನ ವಿವರಗಳನ್ನು ನೀಡಿದರು. ತಮ್ಮ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ರವಾನೆಯಾಗಲು ಬಿ.ವೈ.ರಾಘವೇಂದ್ರ ಅವರು ತನ್ನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಡೂಪ್ಲಿಕೇಟ್ ಫೋಟೋಗಳನ್ನು ಬಳಸಿದ್ದಾರೆ ಮತ್ತು ತಾನೊಂದು ಪತ್ರಿಕಾಗೋಷ್ಟಿ ನಡೆಸಿರುವ ಹಾಗೆ ಸನ್ನಿವೇಶವೊಂದನ್ನು ಸೃಷ್ಟಿಸಿ ಅದರಲ್ಲಿ ತಾನು, ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರಿಗೆ ವೋಟು ನೀಡಿ, ತನಗೆ ತಪ್ಪಿನ ಅರಿವಾಗಿದೆ, ಕಾಂಗ್ರೆಸ್ ಗೆ ಪ್ರಯೋಜನ ಅಗೋದು ಬೇಡ ಎಂದು ಹೇಳಿರುವಂತೆ ಅಚ್ಚು ಹಾಕಿಸಿ, ಮತದಾನಕ್ಕೆ ಒಂದು ದಿನ ಮುಂಚೆ ಜನರಿಗೆ ಹಂಚಲಾಗಿದೆ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ತಾನು ರಾಘವೇಂದ್ರ ಪರ ಪ್ರಚಾರ ಮಾಡಿದ್ದ ವಿಡಿಯೋ ಬಳಸಿ ಪೆನ್ ಡ್ರೈವ್ ಗಳನ್ನು ತಯಾರು ಮಾಡಿ ಅವುಗಳನ್ನೂ ಪ್ರಚಾರದ ವೇಳೆ ಜನರಿಗೆ ಹಂಚಲಾಗಿದೆ ಎಂದು ಈಶ್ವರಪ್ಪ ಹೇಳಿದರು.

ರಾಘವೇಂದ್ರನಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ, ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಪೊಲೀಸರು ಅಪರಿಚಿತ ವ್ಯಕ್ತಿಯ ಹೆಸರಲ್ಲಿ ಎಫ್ಐಅರ್ ದಾಖಲಿಸಿದ್ದಾರೆ, ಆದರೆ ರಾಘವೇಂದ್ರ ವಿರುದ್ಧವೇ ಅದು ದಾಖಲಾಗಬೇಕು ಎಂದು ಈಶ್ವರಪ್ಪ ಕಿಡಿ ಕಾರಿದರು.


Share It

You cannot copy content of this page