ಅಪರಾಧ ಉಪಯುಕ್ತ ರಾಜಕೀಯ ಸುದ್ದಿ

ಕೋವಿಡ್ ಲಸಿಕೆ ಅಡ್ಡ ಪರಿಣಾಮ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನ್ಯಾಯಾಲಯಕ್ಕೆ ರಿಟ್

Share It

ವಾರಾಣಸಿ: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಅಡ್ಡಪರಿಣಾಮಗಳಾಗುವ ಕುರಿತಂತೆ ಲಸಿಕೆ ತಯಾರಿಕೆ ಕಂಪನಿಯೇ ಒಪ್ಪಿಕೊಂಡ ನಂತರ, ಅದರ ಬಳಕೆಗೆ ಪ್ರೋತ್ಸಾಹಿಸಿದ ನರೇಂದ್ರ ಮೋದಿ ಸೇರಿ ೨೭ ಜನರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಲಾಗಿದೆ.

ಲಸಿಕೆಯಿಂದ ಆಗುವ ಅಡ್ಡಪರಿಣಾಮಗಳ ಕುರಿತು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಕೆಯಾಗಿದೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಿಗೆ ಸಲ್ಲಿಸಲಾದ ಈ ಅರ್ಜಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಸೀರಂ ಇನ್‌ಸ್ಟಿಟ್ಯೂಟ್ ಕಂಪನಿ, ಅದರ ಅಧ್ಯಕ್ಷರು, ಈಸ್ಟ್ರೊಜೆನ್ ಕಂಪನಿಯ ಸಿಇಒ ಮತ್ತು ಅದರ ಅಧ್ಯಕ್ಷರು ಸೇರಿ ೨೮ ಮಂದಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ವಾರಣಾಸಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ವಕೀಲ ವಿಕಾಸ್ ಸಿಂಗ್ ಅವರು ತಮ್ಮ ವಕೀಲ ಗೋಪಾಲ್ ಕೃಷ್ಣ ಅವರ ಮೂಲಕ ಮಾನವ ಹಕ್ಕುಗಳ ಕಾಯ್ದೆ ೧೯೯೩ರ ಅಡಿ ನ್ಯಾಯಾಲಯಕ್ಕೆ ಈ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮೇ. ೨೩ಕ್ಕೆ ನಿಗದಿಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಸೀರಮ್ ಇನ್‌ಸ್ಟಿಟ್ಯೂಟ್ , ಅದರ ಅಧ್ಯಕ್ಷರು, ಸಿಇಒ, ಈಸ್ಟ್ರೊಜೆನ್ ಕಂಪನಿ ಮತ್ತು ಅದರ ಅಧ್ಯಕ್ಷರು ಸೇರಿ ಎಲ್ಲಾ ೨೮ ಮಂದಿ ಸೇರಿಕೊಂಡು ಯಾವುದೇ ಪರೀಕ್ಷೆಯಿಲ್ಲದೆ ಕೋವಿಶೀಲ್ಡ್ ಎಂಬ ಔಷಧವನ್ನು ತಯಾರಿಸಿ ಕೊರೊನಾ ಲಸಿಕೆಯಾಗಿ ಜನರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಲಸಿಕೆ ಉತ್ಪಾದನಾ ಕಂಪನಿಯು ಗಳಿಸಿದ ಲಾಭಾಂಶವನ್ನು ದೇಣಿಗೆಯ ರೂಪದಲ್ಲಿ ಪ್ರಧಾನಿ ಕೇರ್ ಫಂಡ್‌ಗೆ ನೀಡಿದೆ. ಔಷಧವು ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿದಿದ್ದರೂ ಇವರು ಜನರನ್ನು ಉದ್ದೇಶಪೂರ್ವಕವಾಗಿ ಸಾವಿನ ಕೂಪಕ್ಕೆ ತಳ್ಳಿದ್ದಾರೆ.

ಈ ಪ್ರಕರಣದ ಗಂಭೀರತೆ ಗಮನದಲ್ಲಿಟ್ಟುಕೊಂಡು ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿ ೨೮ ಆರೋಪಿಗಳನ್ನಾಗಿ ಕರೆಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಈ ಔಷಧದ ದುಷ್ಪರಿಣಾಮದಿಂದ ಬಳಲುತ್ತಿರುವ ಎಲ್ಲ ಜನರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.


Share It

You cannot copy content of this page