ಶಿವಮೊಗ್ಗ/ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎ ತೀವ್ರಗೊಳಿಸಿದ್ದು, ಇದೀಗ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಾಯಿಪ್ರಸಾದ್ ಎನ್ನುವಾತನನ್ನು ಇಂದು (ಏಪ್ರಿಲ್ 05) ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿದ್ದ ಎನ್ಐಎ ಅಧಿಕಾರಿಗಳು, ಇದೀಗ ತೀರ್ಥಹಳ್ಳಿ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿರುವ ಸಾಯಿಪ್ರಸಾದ್ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಮಾರ್ಚ್ 27ರಂದು ಇಂಬ್ರೇಜ್ ಮಾಲೀಕತ್ವದ ಡಿಜಿಟಲ್ ಜೋನ್ ಮೊಬೈಲ್ ಮಳಿಗೆ ಮೇಲೆ ಎನ್ಐಎ ದಾಳಿ ಮಾಡಿತ್ತು. ದಾಳಿ ವೇಳೆ ಸಾಯಿಪ್ರಸಾದ್ ಸಂಬಂಧದ ಬಗ್ಗೆ ಎನ್ಐಎಗೆ ಮಾಹಿತಿ ಸಿಕ್ಕಿದೆ. ಹಾಗೇ ಮೊಬೈಲ್ ಅಂಗಡಿ ಮಾಲೀಕನಿಗೆ ಸಾಯಿಪ್ರಸಾದ್ ಸ್ನೇಹಿತ. ಇದೇ ಆಧಾರದ ಮೇಲೆ ಎನ್ಐಎ ಅಧಿಕಾರಿಗಳು ಸಾಯಿಪ್ರಸಾದ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಕಳೆದ ಮಾರ್ಚ್ 1ರಂದು ಬೆಂಗಳೂರಿನ ವೈಟ್‌ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 9 ಜನರು ಗಾಯಗೊಂಡಿದ್ದರು. ಘಟನೆ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಮಾಹಿತಿಯನ್ನು ಕಲೆಹಾಕಿದೆ. ಅಲ್ಲದೇ ಓರ್ವನನ್ನು ಬಂಧಿಸಿದೆ. ಆದ್ರೆ, ಘಟನೆ ನಡೆದು ತಿಂಗಳು ಕಳೆದರೂ ಸಹ ಬಾಂಬರ್ನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.