ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟದ ಆರೋಪಿಗಳಲ್ಲಿ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಇಬ್ಬರು ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಶಾಜಿಬ್‌ನ ಎನ್‌ಐಎ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯದ ಮುಂದೆ ಎನ್‌ಐಎ ಅಧಿಕಾರಿಗಳು ಆರೋಪಿಗಳನ್ನು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯ ಇಬ್ಬರು ಆರೋಪಿತರನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿದೆ.
ಮಾರ್ಚ್ ೧ರಂದು ಐಟಿಪಿಎಲ್ ರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಕೆಫೆ ಸಿಬ್ಬಂದಿ, ಗ್ರಾಹಕರ ಸಹಿತ ೯ ಜನ ಗಾಯಗೊಂಡಿದ್ದರು. ಬಳಿಕ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಲಾಗಿತ್ತು. ೪೦ ದಿನಗಳ ಶೋಧ ಕಾರ್ಯಾಚರಣೆ ಹಾಗೂ ಹಲವು ಶಂಕಿತರ ವಿಚಾರಣೆ ಬಳಿಕ ಎನ್‌ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಕೋಲ್ಕತ್ತಾದಲ್ಲಿ ಬಂಧಿಸಿದ್ದರು.