ಅಪರಾಧ ಸುದ್ದಿ

ಟ್ರೈನಿಂಗ್ ಅಕಾಡೆಮಿಯಲ್ಲಿ ಐಪಿಎಸ್ ಪ್ರೊಬೋಷನರಿ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಯತ್ನ: ಪ್ರಕರಣ ದಾಖಲು, ಆರೋಪಿ ಬಂಧನ

Share It

ಹೈದರಾಬಾದ್: ರಾಷ್ಟ್ರೀಯ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ 30 ವರ್ಷದ ಮಹಿಳಾ ಪ್ರೊಬೇಷನರಿ ಅಧಿಕಾರಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಓರ್ವ ಅಧಿಕಾರಿಯ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ 33 ವರ್ಷದ ಅಧಿಕಾರಿಯನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಟೈಮ್ಸ್‌ ಆಪ್ ಇಂಡಿಯಾ ವರದಿ ಮಾಡಿದೆ.

ಆರೋಪಿಯು ಮಹಿಳಾ ಅಧಿಕಾರಿಯ ಜತೆಗೆ ಸಲುಗೆಯಿಂದಿದ್ದು, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ವಿರೋಧಿಸಿದ ಆಕೆಗೆ ಚಾಕುವಿನಿಂದ ಬೆದರಿಸಿದ ಬಗ್ಗೆ ಪುರಾವೆಗಳು ದೊರೆತಿವೆ. ಆಕೆಯ ಕುತ್ತಿಗೆಯ ಭಾಗದಲ್ಲಿ ಹಿಸುಕಿದ ಗುರುತುಗಳು ಪತ್ತೆಯಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಆರೋಪಿಯ ವಿರುದ್ಧ ಕೊಲೆ ಯತ್ನ ಮತ್ತು ಅತ್ಯಾಚಾರ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ವಿಚಾರಣೆ ಕೈಗೊಂಡಿದ್ದಾರೆ. ರಾಷ್ಟ್ರೀಯ ಪೊಲೀಸ್ ತರಬೇತಿ ಅಕಾಡೆಮಿಯಲ್ಲಿ ಘಟನೆ ನಡೆದಿರುವುದು ಸಾರ್ವಜನಿಕ ಆಕ್ಷೇಪಕ್ಕೆ ಕಾರಣವಾಗಿದೆ.


Share It

You cannot copy content of this page