ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ, ನೈಟ್ ಬೀಟ್ ಮಾಡುವ ಪೊಲೀಸ್ ಸಿಬ್ಬಂದಿಯೂ ರಕ್ಷಣೆಯಿಲ್ಲದ ಸ್ಥಿತಿಯಲ್ಲಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವಿಸಿದ್ದನ್ನು ಪ್ರಶ್ನಿಸಿದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೇ 3 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರ್ಯನ್ ಮತ್ತು ಹರ್ಷ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಪಜೆರೋ ಕಾರಿನಲ್ಲಿ ರಾತ್ರಿ ವಿಹಾರಕ್ಕೆ ಹೋಗಿದ್ದರು. ಅಮೃತಹಳ್ಳಿಯ ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಈ ಸಮಯದಲ್ಲಿ, ಸ್ಥಳಕ್ಕೆ ಬಂದ ನೈಟ್ ಬೀಟ್ ಸಿಬ್ಬಂದಿ ರುದ್ರಪ್ಪ ಮತ್ತು ಹನುಮಂತು ಇದನ್ನು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಯುವಕರು ಪೊಲೀಸರ ಮೇಲೆ ತಮ್ಮ ದುರಹಂಕಾರವನ್ನು ಪ್ರದರ್ಶಿಸಿದ್ದಲ್ಲದೆ, ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ ಹರ್ಷ ಮತ್ತು ಆರ್ಯನ್ ಅವರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಹರ್ಷ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ, ಆರ್ಯನ್ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ಪಡೆಯುತ್ತಿದ್ದಾನೆ ಎಂದು ಡಿಸಿಪಿ (ಈಶಾನ್ಯ ವಿಭಾಗ) ಜಿ.ಕೆ. ಮಿಥುನ್ ಹೇಳಿದ್ದಾರೆ. ವಿದ್ಯಾವಂತ ಯುವಕರು ಇಂತಹ ಗೂಂಡಾಗಿರಿಯಲ್ಲಿ ತೊಡಗುತ್ತಿರುವುದು ಆತಂಕಕಾರಿ.

