ಚೆನ್ನೈ: ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿರುವ ಟಿವಿಕೆ ಗದ್ದುಗೆ ಹಿಡಿಯಲು ಸರ್ಕಸ್ ನಡೆಸುತ್ತಿದೆ. ಇನ್ನೊಂದೆಡೆ, ಬದ್ಧ ಎದುರಾಳಿಗಳಾಗಿರುವ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ವದಂತಿ ಬಗ್ಗೆ ವರದಿಯಾಗಿದೆ.
ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿದ ಬೆನ್ನಲ್ಲೇ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳು ಮೈತ್ರಿಯ ಮಾತುಕತೆ ನಡೆಸಿವೆ ಎಂಬ ವರದಿಗಳು ಬುಧವಾರ ಹೊರಬಂದಿದ್ದವು. ಆದರೆ ಈ ವರದಿಗಳನ್ನು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ತಳ್ಳಿಹಾಕಿದ್ದಾರೆ.
6 ತಿಂಗಳು ಯಾವುದೇ ಸಮಸ್ಯೆ ಮಾಡಲ್ಲ: ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲಿರುವ ನಟ ಕಂ ರಾಜಕಾರಣಿ ವಿಜಯ್ ಅವರಿಗೆ ಪಕ್ಷವು ಕನಿಷ್ಠ 6 ತಿಂಗಳ ಕಾಲ ಯಾವುದೇ ಅಡೆತಡೆಗಳನ್ನು ಸೃಷ್ಟಿಸುವುದಿಲ್ಲ ಎಂದು ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.
ಸದ್ಯಕ್ಕೆ ಡಿಎಂಕೆ ಯಾವುದೇ ರಾಜಕೀಯ ಗೊಂದಲ ಸೃಷ್ಟಿ ಮಾಡಲ್ಲ. ಮುಂದಿನ ದಿನಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಇನ್ನೊಂದು ಚುನಾವಣೆಯನ್ನು ಡಿಎಂಕೆ ಬಯಸುವುದಿಲ್ಲ. ಆರು ತಿಂಗಳ ಕಾಲ ವಿಜಯ್ ಅವರ ಆಡಳಿತವನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಎಐಡಿಎಂಕೆ ಆಫರ್ ತಿರಸ್ಕರಿಸಿದ ಡಿಎಂಕೆ: ಸರ್ಕಾರ ರಚನೆ ಸಂಬಂಧ ಡಿಎಂಕೆ ಜೊತೆ ಮೈತ್ರಿಗೆ ಎಐಡಿಎಂಕೆ ಪ್ರಯತ್ನಿಸಿದೆ ಎಂದು ವರದಿಯಾಗಿದೆ. ಮತದಾರರ ತೀರ್ಪಿನಂತೆ ವಿರೋಧ ಪಕ್ಷದಲ್ಲಿರುವುದಾಗಿ ಡಿಎಂಕೆ ತಿಳಿಸಿದೆ ಎಂದು ಹೇಳಲಾಗುತ್ತಿದೆ.
ತ್ರಿಶಂಕು ಪರಿಸ್ಥಿತಿ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಿಲ್ಲ. ಟಿವಿಕೆ 108 ಸ್ಥಾನಗಳಲ್ಲಿ ಜಯಿಸಿದ್ದು, ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ. ಇನ್ನು ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2 ಮತ್ತು ಸಿಪಿಐ-ಎಂ 2, ವಿಸಿಕೆ 2 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ 1 ಸ್ಥಾನಗಳನ್ನು ಪಡೆದಿವೆ.
ಯಾವ ಪಕ್ಷವೂ ಮ್ಯಾಜಿಕ್ ನಂಬರ್ 118 ತಲುಪದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಮತದ ಸನಿಹದಲ್ಲಿರುವ ಟಿವಿಕೆ ಮುಖ್ಯಸ್ಥ ವಿಜಯ್ ಅವರು ಸರ್ಕಾರ ರಚನೆಗೆ ಮುಂದಾದರೂ ಈವರೆಗೆ ಖಚಿತ ಬೆಂಬಲ ಸಿಕ್ಕಿಲ್ಲ. ಇದರಿಂದಾಗಿ ತಮಿಳುನಾಡು ರಾಜಕಾರಣ ಸದ್ಯ ಕುತೂಹಲ ಹುಟ್ಟಿಸಿದೆ.
ಡಿಎಂಕೆ-ಕಾಂಗ್ರೆಸ್ ಮೈತ್ರಿ ಮುಗಿದ ಅಧ್ಯಾಯ: ಸರ್ಕಾರ ರಚನೆಯ ಹೊಸ್ತಿಲಲ್ಲಿರುವ ಟಿವಿಕೆ ಜೊತೆ ಕೈ ಜೋಡಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಈ ಮೂಲಕ ಡಿಎಂಕೆಯೊಂದಿಗಿನ ಬಹುಕಾಲದ ಮೈತ್ರಿಯನ್ನು ‘ಕೈ’ ಬಿಟ್ಟಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಡಿಎಂಕೆ ಹರಿಹಾಯ್ದಿದೆ.

