ರಾಜಕೀಯ ಸುದ್ದಿ

ಎಲ್ಲಾ ವರ್ಗದ ಬೆಂಬಲ, ಕಾಂಗ್ರೆಸ್ ಗೆ ಬಲ: ವೆಂಕಟರಮಣೇಗೌಡ (ಸ್ಟಾರ್ ಚಂದ್ರು)

Share It

ನಾಗಮಂಗಲ: ಸರ್ವರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ತತ್ವ ಸಿದ್ಧಾಂತಗಳನ್ನು ಕಾಂಗ್ರೆಸ್ ಅಳವಡಿಸಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಎಲ್ಲಾ ವರ್ಗದ ಜನತೆಯನ್ನು ತಲುಪುತ್ತಿದೆ. ಈ ಚುನಾವಣೆಯಲ್ಲಿ ಎಲ್ಲಾ ವರ್ಗದ ಜನತೆ ನನ್ನನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಗೆ ಬಲ ತುಂಬಲಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಹೇಳಿದರು.

ನಾಗಮಂಗಲ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಮಾಜದ ಸರ್ವರಿಗೂ ಸರ್ಕಾರಿ ಯೋಜನೆಗಳು ತಲುಪಬೇಕು. ಆರ್ಥಿಕವಾಗಿ ಹಿಂದುಳಿದವರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಪಂಚ ಗ್ಯಾರಂಟಿಗಳನ್ನು ಒಳಗೊಂಡ 25 ಭರವಸೆಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಕಾಂಗ್ರೆಸ್ ಪ್ರಣಾಳಿಕೆಯ ಘೋಷಣೆಗಳು ಸಾಕಷ್ಟು ಜನಮನ್ನಣೆ ಪಡೆಯುತ್ತಿದ್ದು ಜನ ‘ಕೈ’ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶ ಕಟ್ಟುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ, ದೀನದಲಿತರ ಪರವಾಗಿ ಹತ್ತು ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಜನಪರ ಕಾರ್ಯಕ್ರಮಗಳಿಗೆ ಮನ್ನಣೆ ಸಿಗಲಿದೆ ಎಂಬುದಕ್ಕೆ ಪ್ರಚಾರದ ಸಂದರ್ಭದಲ್ಲಿ ನೆರೆದಿರುವ ಜನಸ್ತೋಮವೇ ಸಾಕ್ಷಿ. ಬಿರುಬಿಸಿಲಿನಲ್ಲೂ ಜನರು ಆಗಮಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾಂಗ್ರೆಸ್ ನ ಕಾರ್ಯಕ್ರಮಗಳೇ ಕಾರಣ ಎಂದರು.

ಜಿಲ್ಲೆಯ ಜನತೆ ನನ್ನ ಕೈ ಹಿಡಿಯಲಿದ್ದಾರೆ. ಈ ಜಿಲ್ಲೆಯ ಸ್ವಾಭಿಮಾನದ ಚುನಾವಣೆ ಇದಾಗಿದೆ. ನನ್ನ ಗೆಲುವು ರೈತರ ಗೆಲುವು. ಈ ಮಣ್ಣಿನ ಮಗನನ್ನು ಆಶೀರ್ವದಿಸಿ ಸಂಸತ್ತಿಗೆ ಕಳುಹಿಸುತ್ತಾರೆ ಎಂಬ ಅಚಲವಾದ ನಂಬಿಕೆಯಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನಾ ಸಮುದಾಯಗಳ ಬೆಂಬಲ: ಜಿಲ್ಲೆಯ ಈಡಿಗ, ಕುರುಬ, ಉಪ್ಪಾರ, ದಲಿತ ಸಂಘರ್ಷ ಸಮಿತಿಗಳು ಇಂದು ನಾಗಮಂಗಲ ಮತ್ತು ಮಂಡ್ಯದಲ್ಲಿ ಜಾಗೃತಿ ಸಭೆ ನಡೆಸಿ ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದವು. ಹಿಂದುಳಿದ ಸಮುದಾಯಕ್ಕೆ ಕಾಂಗ್ರೆಸ್ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಲು ಕಾಂಗ್ರೆಸ್ ಗೆ ಬೆಂಬಲ ಸೂಚಿಸುವುದಾಗಿ ಸಮುದಾಯದ ಮುಖಂಡರು ಹೇಳಿದರು.

ಕ್ರೈಸ್ತ ಸಮುದಾಯದ ಮುಖಂಡರ ಭೇಟಿ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಫಾದರ್ ದೇವ್ ಕುಮಾರ್ ಅವರ ಮುಂದಾಳತ್ವದಲ್ಲಿ ಮಂಡ್ಯದ ಆರ್. ಪಿ ರಸ್ತೆಯಲ್ಲಿ ಕ್ರೈಸ್ತ ಸಮುದಾಯದವರನ್ನು ಭೇಟಿಯಾಗಿ ಮತಯಾಚಿಸಿದರು.

30ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ: ನಾಗಮಂಗಲ ತಾಲೂಕು ತುಪ್ಪದಮಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳ ವಿತರಣೆ ಸಮಾರಂಭದಲ್ಲಿ 30ಕ್ಕೂ ಅಧಿಕ ಜೆಡಿಎಸ್ ಕಾರ್ಯಕರ್ತರು ಸಚಿವ ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.


Share It

You cannot copy content of this page