ಬೆಂಗಳೂರು: ವಿಶ್ವಕಪ್ ಟಿ-೨೦ ಅಭಿಯಾನಕ್ಕೆ ಮತ್ತೊಮ್ಮೆ ಕನ್ನಡಿಗರಿಲ್ಲದ ತಂಡವನ್ನು ಆಯ್ಕೆ ಮಾಡಿರುವ ಬಿಸಿಸಿಐ ಕೆ.ಎಲ್. ರಾಹುಲ್ ಸೇರಿ ಯಾವೊಬ್ಬ ಕನ್ನಡಿಗನ್ನು ಪರಿಗಣಿಸಿಲ್ಲ.
ಮುಂಬೈ ಲಾಭಿ ಭಾರತೀಯ ಕ್ರಿಕೆಟ್‌ಗೆ ಕಾಲಿಟ್ಟಾಗಲೆಲ್ಲ ಕನ್ನಡಿಗರನ್ನು ಕಡೆಗಣಿಸುವುದು ನಡೆದುಕೊಂಡೇ ಬಂದಿದೆ. ಇದೀಗ ಅದೇ ಮಾದರಿ ಮುಂದುವರಿದಿದ್ದು, ಅಜಿತ್ ಅಗರ್‌ಕರ್ ನೇತೃತ್ವದ ಆಯ್ಕೆ ಸಮಿತಿ ಕನ್ನಡಿಗರಿಲ್ಲದ ತಂಡವನ್ನು ಆಯ್ಕೆ ಮಾಡಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿ ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯಲಿದೆ. ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಯಜುವೇಂದ್ರ ಚಹಲ್, ಅಪಘಾತಕ್ಕೀಡಾಗಿ ವರ್ಷದ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದ ರಿಷಬ್ ಪಂತ್ ಸ್ಥಾನ ಪಡೆದಿದ್ದರೆ, ಕನ್ನಡಿಗ ಕೆ.ಎಲ್.ರಾಹುಲ್ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ನೀಡಿದ್ದರೆ, ಹಾರ್ದಿಕ್ ಪಾಂಡ್ಯ ಅವರನ್ನು ಉಪ ನಾಯಕರಾಗಿ ಮುಂದುವರಿಸಲಾಗಿದೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಮಂಗಳವಾರ ನಡೆದ ತಂಡದ ಆಯ್ಕೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭಾಗಿಯಾಗಿದ್ದರು. ಸ್ಟ್ರೈಕ್‌ರೇಟ್ ಬಗ್ಗೆ ಅಪಸ್ವರ ಕೇಳಿಬಂದರೂ, ಹಿರಿಯ ಆಟಗಾರ ವಿರಾಟ್ ಕೊಹ್ಲಿಯನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇಬ್ಬರು ವಿಕೆಟ್ ಕೀಪರ್‌ಗಳಾಗಿ ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಇರಲಿದ್ದಾರೆ.
ನಾಯಕನಾಗಿ ರೋಹಿತ್ ಶರ್ಮಾ ಅವರನ್ನೇ ಮುಂದುವರಿಸಿರುವ ಆಯ್ಕೆಸಮಿತಿ, ಹಲವು ಸರಣಿಗಳಿಗೆ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಉಪ ನಾಯಕರಾಗಿ ಆಯ್ಕೆ ಮಾಡಿದ್ದಾರೆ. ಯುವ ಆಟಗಾರ, ಡ್ಯಾಶಿಂಗ್ ಓಪನರ್ ಯಶಸ್ವಿ ಜೈಸ್ವಾಲ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಟಿ೨೦ ನಂಬರ್ ೧ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸ್ಥಾನ ಅಬಾಧಿತವಾಗಿದೆ. ಆಲ್‌ರೌಂಡರ್‌ಗಳ ಸಾಲಿನಲ್ಲಿ ಹಾರ್ದಿಕ್ ಪಾಂಡ್ಯ, ಮೊದಲ ಸಲ ವಿಶ್ವಕಪ್ ಆಡುತ್ತಿರುವ ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಇರಲಿದ್ದಾರೆ. ‘ಕುಲ್ಚಾ’ ಜೋಡಿ ಖ್ಯಾತಿಯ ಕುಲದೀಪ್ ಯಾದವ್, ಯಜುವೇಂದ್ರ ಚಹಲ್ ಸ್ಪಿನ್ ಜೋಡಿ ಮತ್ತೆ ಒಂದಾಗಿದೆ.
ವೇಗದ ಬೌಲಿಂಗ್ ನೇತೃತ್ವವನ್ನು ಜಸ್ಪ್ರೀತ್ ಬುಮ್ರಾ ವಹಿಸಿದರೆ, ಮೊಹಮದ್ ಸಿರಾಜ್, ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದಾರೆ. ಭಾರತ ತಂಡದ ಸೆನ್ಸೇಷನ್‌ಗಳಾದ ಶುಭ್‌ಮನ್ ಗಿಲ್, ರಿಂಕು ಸಿಂಗ್ ಮೀಸಲು ತಂಡದಲ್ಲಿದ್ದಾರೆ.
ರಾಹುಲ್‌ಗೆ ನಿರಾಸೆ: ಉತ್ತಮ ಲಯದಲ್ಲಿದ್ದರೂ ಕನ್ನಡಿಗ ಕೆ.ಎಲ್.ರಾಹುಲ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ರಾಹುಲ್ ೩೫೦ಕ್ಕೂ ಅಧಿಕ ರನ್ ಕಲೆ ಹಾಕಿ ಮುಂಚೂಣಿಯಲ್ಲಿದ್ದರು. ಕರ್ನಾಟಕದಿಂದ ಕೆ.ಎಲ್.ರಾಹುಲ್ ವಿಶ್ವಕಪ್ ತಂಡದಲ್ಲಿ ಆಡಿಯೇ ಆಡುತ್ತಾರೆ ಎಂಬುದು ಬಹುತೇಕ ಅಭಿಮಾನಿಗಳ ಆಸೆಯಾಗಿತ್ತು. ಆದರೆ, ಅವರಿಗೆ ನಿರಾಸೆಯಾಗಿದೆ. ಇದರಿಂದ ನಿರಾಶರಾದ ರಾಹುಲ್ ತಮ್ಮ ಇಸ್ಟಾಗ್ರಾಂ ಖಾತೆಯಲ್ಲಿ ಸೈಲೆಂಟ್ ಇಸ್ ಬೆಸ್ಟ್ ಆನ್ಸರ್ ಫಾರ್ ಎವೆರಿ ಕೊಶ್ಚನ್, ಸ್ಮೆöÊಲ್ ಇಸ್ ಬೆಸ್ಟ್ ರಿಯಾಕ್ಷನ್ ಫಾರ್ ಎವೆರಿ ಸಚ್ಯುವೇಷನ್ ಎಂದು ಬರೆದುಕೊಂಡಿದ್ದಾಋಎ.
ವಿಶ್ವಕಪ್‌ಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಮೀಸಲು ಆಟಗಾರರು: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.