ರಾಜಕೀಯ ಸುದ್ದಿ

ಜನಾಂದೋಲನವಾಗಿ ಬದಲಾಗುತ್ತಿದೆ ಗಣಿ ಹೋರಾಟ

Share It

ಗಣಿಗಾರಿಕೆ ಆದೇಶ ರದ್ದು: ಜನರ ಮಹತ್ವದ ನಿರ್ಣಯ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೋಟೆ ಬೆಟ್ಟದ ಗಣಿಗಾರಿಕೆಗೆ ಜನರ ಒಪ್ಪಿಗೆ ಇಲ್ಲದೆ ಅನುಮತಿ ನೀಡಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಆದೇಶವನ್ನು ವಿರೋಧಿಸಿ, ಐದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರು ತಾವೇ ವಿಶೇಷ ನಿರ್ಣಯ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಸಕಲೇಶಪುರ ತಾಲ್ಲೂಕಿನ ಎಸಳೂರು ಹೋಬಳಿಗೆ ಸೇರಿದ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವ ಕುರಿತು ಹೊಸೂರು, ವಣಗೂರು, ಚಂಗಡಹಳ್ಳಿ, ಉಚ್ಚoಗಿ, ಹಾಗು ಕೊಡಗು ಜಿಲ್ಲೆಗೆ ಸೇರಿದ ತೋಳೂರು ಶೆಟ್ಟಹಳ್ಳಿ – ಈ ಐದೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನರು ಒಟ್ಟು ಸೇರಿ ಮಾ.೩೦ರ ಶನಿವಾರ ಪ್ರತಿಭಟನಾ ಸಭೆ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಯೋಜನೆ ಅಥವಾ ನಿರ್ಧಾರಗಳನ್ನು ಅಧಿಕಾರಿಗಳು ಅಥವಾ ಮತ್ತಾರೋ ತೆಗೆದುಕೊಳ್ಳುವುದು ಪ್ರಜಾಧಿಕಾರಕ್ಕೆ ವಿರುದ್ಧವಾದುದು. ನಮ್ಮ ಹೊಸಕೋಟೆ ಬೆಟ್ಟದ ಗಣಿಗಾರಿಕೆಗೆ ನೀಡಿರುವ ಅನುಮತಿ ಆದೇಶ ಸ್ಥಳೀಯ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರಹಾಕಿದರು

ಸಭೆಯಲ್ಲಿ ಸ್ಥಳೀಯ ವಿವಿಧ ಗ್ರಾಮಗಳ ಜನರು ತಮ್ಮ ವಿರೋಧವನ್ನು ವೇದಿಕೆಯಲ್ಲಿ ವ್ಯಕ್ತಪಡಿಸಿ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ, ಹೊಸಕೋಟೆ ಬೆಟ್ಟ ಪ್ರದೇಶದ ಜೀವ ವೈವಿಧ್ಯ ಹಾಗೂ ಜಲಮೂಲಗಳ ರಕ್ಷಣೆಗಾಗಿ ಸ್ಥಳೀಯರಾದ ನಾವು ಇಂದು, ಗಣಿ ವ್ಯಾಪಾರಿಗಳಿಗೆ ನೀಡಿರುವ ಅನುಮತಿ ಆದೇಶವನ್ನು ರದ್ದು ಪಡಿಸುತ್ತಿದ್ದೇವೆ. ಅಲ್ಲದೇ ಶಾಂತಿಯುತವಾಗಿ ಗಣಿಗಾರಿಕೆ ನಡೆಸುವವರಿಗೆ ಪರಿಸರದ ಮಹತ್ವ ತಿಳಿಸುತ್ತೇವೆ. ಇಂದಿನ ನಿರ್ಣಯದಂತೆ ಹೊಸಕೋಟೆ ಬೆಟ್ಟದ ಬಳಿ ಇಲಾಖೆಯ ಆದೇಶ ರದ್ದುಪಡಿಸಿರುವುದಾಗಿ ನಾಮಫಲಕ ಹಾಕುತ್ತೇವೆ. ಇದು ನಮ್ಮ ಪ್ರತಿಭಟನೆಯ ವಿಧಾನ ಎಂದರು.

ಹಾಸನದ ಪರಿಸರಕ್ಕಾಗಿ ನಾವು ಬಳಗ ಹಾಗು ಹಸಿರು ಭೂಮಿ ಪ್ರತಿಷ್ಠಾನದ ಪುರುಷೋತ್ತಮ್ ಪಿ.ಅವರು ಮಾತನಾಡಿ ಗಣಿಗಾರಿಕೆಯಂಥ ಪರಿಸರ ವಿರೋಧಿ ಚಟುವಟಿಕೆಗಳನ್ನು ಜನರು ಒಗ್ಗಟ್ಟಿನಿಂದ ಎದುರಿಸಬೇಕು. ಪಶ್ಚಿಮ ಘಟ್ಟಗಳ ಸೌಂದರ್ಯ ಹಾಗು ಜೀವ ವೈವಿಧ್ಯ ನಿರಂತರವಾಗಿ ಉಳಿಯಲಿ ಎಂದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತರೂ ಪರಿಸರ ಕಾರ್ಯಕರ್ತರೂ ಆದ ಆರ್. ಪಿ. ವೆಂಕಟೇಶ ಮೂರ್ತಿ ಅವರು, ಜಾಗತಿಕ ತಾಪಮಾನ ಏರಿಕೆ ಕುರಿತು ವಿವರಿಸಿ ಸರ್ಕಾರ ಈ ಭಾಗದ ರೈತರಿಗೆ ಏಲಕ್ಕಿ ಬೆಳೆಯಲು ಪ್ರತಿ ಎಕರೆಗೆ ಕನಿಷ್ಠ ೨೦ ಸಾವಿರ ರೂ.ಗಳನ್ನು ಪ್ರೋತ್ಸಾಹಧನವನ್ನು ನೀಡುವಂತೆ ಒತ್ತಾಯಿಸಿದರು. ಹೋರಾಟದ ಅಗತ್ಯ ಹಾಗು ರೂಪುರೇಷೆ ಕುರಿತು ಅವರು ಮಾತನಾಡಿದರು. ಕಾಫಿ ಬೆಳೆಗಾರರ ಸಂಘದ ಬೆಕ್ಕನಹಳ್ಳಿ ನಾಗರಾಜ್ ಮಾತನಾಡಿ ಪರಿಸರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಜನ ಪ್ರತಿನಿಧಿಗಳು ಹಾಗು ಸಾರ್ವಜನಿಕರು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪರಿಸರಕ್ಕಾಗಿ ನಾವು ಹಾಸನ ಬಳಗದ ಬಾಲರಾಜ್ ಎಚ್ ಹಾಗು ಮೋಹನ್ ಮಟ್ಟನವಿಲೆ ಭಾಗವಹಿಸಿದ್ದರು. ಸಭೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ವಿಠಲ್ ಕೌಕೋಡಿ, ಬೆಕ್ಕನಹಳ್ಳಿ ನಾಗರಾಜ್ , ಕೂತಿ ಗ್ರಾಮದ ದಿವಾಕರ್, ಸುಧಾಕರ್, ಗ್ರಾಪಂ ಮಾಜಿ ಗ್ರಾಪಂ ಅಧ್ಯಕ್ಷ ಬಸಪ್ಪ ಸುಂಡವಳ್ಳಿ, ಆಯೋಜಕರಾದ ಪುಟ್ಟೇಗೌಡ, ಹೆಚ್ ಕೆ ರಮೇಶ್,

ಹಾಗು ರಾಮಚಂದ್ರ ಪುಟ್ಟಸ್ವಾಮಿಗೌಡ, ತಿಮ್ಮೇಗೌಡ, ಮಹಿಳಾ ಸ್ವಸಹಾಯ ಸಂಘದ ಗೀತಾ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಮೊದಲಾದವರು ಮಾತನಾಡಿದರು.


Share It

You cannot copy content of this page