ಅಂಕಣ ಸುದ್ದಿ

ಕ್ಲೀನ್ ಇಮೇಜ್ ಬಳಸಿ ಡ್ಯಾಮೇಜ್ ಕಂಟ್ರೋಲ್ ಯತ್ನ

Share It

*ಪ್ರಾದೇಶಿಕ ಅಸ್ಮಿತೆಯ ಫೀಕ್ ಟೈಂನಲ್ಲಿರುವ ಕರ್ನಾಟಕಕ್ಕೊಂದು ಹೊಸ ಸವಾಲು*

*ಇಡೀ ರಾಜ್ಯದ ಐಕಾನ್ ಆಗಬೇಕಿದ್ದವರೆಲ್ಲ ಒಂದು ಪಕ್ಷದ ಆಸ್ತಿಯಾಗುತ್ತಿರುವುದು ದೊಡ್ಡ ದುರಂತ*

ಬಿಜೆಪಿ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾವನಾತ್ಮಕ ವಿಷಯದ ಮೇಲೆ ರಾಜಕೀಯ ಆಟ ಆಡೋದರಲ್ಲಿ ಎತ್ತಿದ ಕೈ. ಹೀಗಾಗಿಯೇ, ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈಗಲೂ ಜೈ ಭಜರಂಗಬಲಿ ಎಂದು ವೋಟ್ ಒತ್ತಿ ಎಂದು ಸಂವಿಧಾನಕ್ಕೆ ವಿರೋಧವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಅಂತಹದ್ದೇ ಭಾವನಾತ್ಮಕ ಆಟವನ್ನು ಈಗ ಕರ್ನಾಟಕದ ಜನರ ಮುಂದೆ ಕಟ್ಟಲು ಹೊರಟಿದ್ದಾರೆ. ಆದರೆ, ಎಂದೂ ಇಂತಹ ಭಾವನಾತ್ಮಕ ಭಾಷಣಗಳಿಗೆ ಬೆರಗಾಗದ ಕರ್ನಾಟಕದ ಪ್ರಜ್ಞಾವಂತ ಮತದಾರ ಮೋದಿ ಮೋಡಿಗೆ ಮಣಿಯುತ್ತಾನಾ ಕಾದು ನೋಡಬೇಕು.

ಬೆಲೆ ಏರಿಕೆಯಿಂದ ದೇಶದ ಜನ ತತ್ತರಿಸಿದ್ದಾರೆ. ದೇಶದ ಜಿಡಿಪಿ ಕುಸಿದು ಪಾತಾಳ ಸೇರಿದೆ. ಡಾಲರ್ ಮೌಲ್ಯ, ಹಸಿವು ಸೂಚ್ಯಂಕ, ಪ್ರಜಾಪ್ರಭುತ್ವ ಸೂಚ್ಯಂಕಗಳಲ್ಲಿ ಭಾರತ ಹೀನಾಯ ಸ್ಥಿತಿಯಲ್ಲಿದೆ. ಕಳೆದ ಹತ್ತು ವರ್ಷದಲ್ಲಿ ಆದ ಮಹತ್ತರ ಸಾಧನೆ ಏನು ಎಂದು ಬಿಜೆಪಿ ಹಿಂಬಾಲಕರನ್ನು ಕೇಳಿದರೆ, ಒಂದೂ ನೆನಪಾಗದೆ ತಡಬಡಾಯಿಸಿ, *ನೀನು ದೇಶದ್ರೋಹಿ ಪಾಕಿಸ್ತಾನಕ್ಕೆ ಹೋಗು* ಎಂದು ಷರಾ ಬರೆದುಬಿಡುತ್ತಾರೆ. ಆರ್ಟಿಕಲ್ 370, ರಾಮಮಂದಿರ ಮತ್ತು ಸಿಎಎಯಂತಹ ಬಹುಸಂಖ್ಯಾತರ ಓಲೈಕೆಯ ಭಾವನಾತ್ಮಕ ಅಸ್ತ್ರವನ್ನು ಬಿಟ್ಟರೆ ಮೋದಿ ಬತ್ತಳಿಕೆಯಲ್ಲಿ ಮತ್ಯಾವ ಪಾಶುಪತಾಸ್ತ್ರವೂ ಉಳಿದಿಲ್ಲ.

ಇದರ ನಡುವೆ ಮೋದಿ ಅವರು ತಮ್ಮದೇ ಪಕ್ಷಕ್ಕೆ ದೇಣಿಗೆ ಪಡೆಯುವ ಸಲುವಾಗಿ ರೂಪಿಸಿದ ಎಲೆಕ್ಟ್ರಾಲ್ ಬಾಂಡ್ ಗಳ ಉರುಳು ಶರಶಯ್ಯೆಯಾಗಿ ಬಿಜೆಪಿಯೆಂಬ ಭೀಷ್ಮನನ್ನು ಬಂಧಿಸುವ ಮುನ್ಸೂಚನೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ಎಸ್ ಬಿ ಐಗೆ ಉಗಿದು ಉಪ್ಪಿನಕಾಯಿ ಹಾಕಿ ಎಲೆಕ್ಟ್ರೋಲ್ ಬಾಂಡ್ ಗಳ ಮಾಹಿತಿ ಒದಗಿಸುವ ತಾಕೀತು ಮಾಡಿದೆ. ಇದು ಆಳುವ ಸರಕಾರಕ್ಕೆ ಇತ್ತೀಚಿನ ದಿನಗಳಲ್ಲಾದ ಅತಿದೊಡ್ಡ ಮರ್ಮಾಘಾತ ಎನ್ನಬಹುದು. ಇದರ ಮಾಹಿತಿ ಬಹಿರಂಗವಾದರೆ, ದೊಡ್ಡದೊಡ್ಡವರು ಕೊಟ್ಟ ಹಿಡನ್ ಇಡುಗಂಟು ಅದೆಷ್ಟು ದೊಡ್ಡ ಪ್ರಮಾಣದ್ದು ಎಂಬುದು ದೇಶದ ಜನರಿಗೆ ಗೊತ್ತಾಗಲಿದೆ‌. ಅದು ಮೋದಿ ತಮ್ಮ ಗೆಳೆಯರಿಗೆ ಮಾಡಿದ ಮಹದುಪಕಾರಕ್ಕೆ ಮರಳಿ ಪಡೆದಿದ್ದು ಎಂಬ ವಿರೋಧ ಪಕ್ಷಗಳ ಆರೋಪದ ಕೈ ಕನ್ನಡಿಯೂ ಆಗಲಿದೆ.

ಈ ನಡುವೆ ಬಿಜೆಪಿ ರಾಮಮಂದಿರ ಉದ್ಘಾಟನೆ ಮಾಡಿದ್ದು, ಇಡೀ ದೇಶದ ಹಿಂಧೂಗಳೆಲ್ಲ ನಮ್ಮ ಪರವೇ ಇದ್ದಾರೆ ಎಂದು ಬೀಗುತ್ತಿದೆ. ಮೋದಿಯಂತೂ ಇದೇ ಬಲದಲ್ಲಿ ನಾವು ನಾಲ್ಕು ನೂರು ಸ್ಥಾನ ಗೆಲ್ಲುತ್ತೇವೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಮಣಿಪುರದ ಮಾಯೆ ಇನ್ನೂ ಸುಡುವ ಹೊತ್ತಿನಲ್ಲೇ ಅದನ್ನು ಮರೆಮಾಚುವ ಮಾಯಾಸ್ತ್ರವಾಗಿ ರಾಮಮಂದಿರವನ್ನು ಸಂಪೂರ್ಣ ಕಾಮಗಾರಿ ಮುಗಿಯುವ ಮೊದಲೇ ಉದ್ಘಾಟನೆ ಮಾಡಲಾಗಿದೆ ಎಂದು ಹಿಂದೂ ಸಮಾಜದ ಕೆಲವು ಮುಖಂಡರೇ ಹೇಳುತ್ತಿದ್ದಾರೆ. ಹಿಂದೂಗಳೆಲ್ಲ ರಾಮಭಜನೆಯಲ್ಲಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂಬ ಭ್ರಮೆಯಲ್ಲಿ ಮೋದಿ ಮತ್ತು ಬಿಜೆಪಿಯ ಸಂಘ ಪರಿವಾರವಿದ್ದರೆ, ಸಂವಿಧಾನ ಬದಲಾವಣೆ ಭೀತಿಯಲ್ಲಿರುವ ಭಾರತದ ಬಹುದೊಡ್ಡ ದಲಿತ ಮತ್ತು ಹಿಂದುಳಿದ ಸಮುದಾಯಗಳು ತಮ್ಮ ಭವಿಷ್ಯವನ್ನು ಶ್ರೀರಾಮನ ಅಶ್ವಮೇಧ ಯಾಗಕ್ಕೆ ಹರಕೆಯ ಕುರಿಯಾಗಲು ಬಿಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇಷ್ಟೆಲ್ಲ ದೇಶದ ಸ್ಥಿತಿಯಾದರೆ, ಉತ್ತರ ಭಾರತದ ದಲಿತ, ಹಿಂದುಳಿದ ಸಮುದಾಯಗಳು ಭಯಕ್ಕೋ, ಮೌಢ್ಯಕ್ಕೋ, ಸಂವಿಧಾನ ಬದಲಾಣೆಯ ಬಿಜೆಪಿಯ ಹಿಡನ್ ಅಜೆಂಡಾದ ಅರಿವಿಲ್ಲದೆಯೋ ಬಿಜೆಪಿಯನ್ನು ಬೆಂಬಲಿಸಿದರೂ, ದಕ್ಷಿಣ ಭಾರತ ಬಿಜೆಪಿಯ ನಾಟಕಕ್ಕೆ ಮಣೆ ಹಾಕಬೇಕಲ್ಲಾ? ಅದರಲ್ಲೂ ಕರ್ನಾಟಕ ಎಂಬ ಪ್ರಜ್ಞಾವಂತ ಮತದಾರನಿಗೆ ಅದ್ಯಾವ ಮಂದಿರದ ಮತ್ತೇರಿಸುವುದು ಎಂಬ ಮೋದಿ ಪರಿವಾರದ ಪ್ರಶ್ನೆಗೆ ಇತ್ತರ ಸಿಗಲಿಲ್ಲ. ಧರ್ಮ ದಂಗಲ್ ನಡೆಸಲು ಹೋದವರೆಲ್ಲ ವಿಧಾನಸಭೆ ಚುನಾವಣೆಯಲ್ಲಿಯೇ ಸೋತು ಸುಣ್ಣವಾಗಿದ್ದಾರೆ. ದತ್ತಪೀಠ ವಿವಾದದ ಮೇಲೆಯೇ ತನ್ನ ಭವಿಷ್ಯ ಕಟ್ಟಿಕೊಂಡಿದ್ದ ಸಿ.ಟಿ.ರವಿ ಸೇರಿದಂತೆ ಹಿಂಧುತ್ವದ ಫೈರ್ ಬ್ರ್ಯಾಂಡ್ ಗಳೆಲ್ಲ ಠುಸ್ಸ್ ಪಟಾಕಿಗಳಾಗಿವೆ. ಇದೀಗ ಅದೇ ವಿಷಯದ ಮೇಲೆ ಚುನಾವಣೆಗೆ ಹೋದರೆ, ಉಚಿತಗಳ ವೈಭೋಗ ಉಂಡು ಸ್ವಲ್ಪವಾದರೂ ಸುಭೀಕ್ಷವಾಗಿರುವ ಕರ್ನಾಟಕದ ಮತದಾರ ಮಹಾಮಂಗಳಾರತಿ ಮಾಡೋದು ಖಚಿತ ಎಂಬುದರ ಅರಿವು ಮೋದಿ ಮತ್ತು ಟೀಂಗಾಗಿದೆ.

ತೆರಿಗೆ ತಾರತಮ್ಯ, ಹಿಂದಿ ಹೇರಿಕೆಯಂತಹ ಅನ್ಯಾಯಗಳ ವಿರುದ್ಧ ಕುದಿಯುತ್ತಿರುವ ಕನ್ನಡಿಗರ ತಣಿಸುವ ಧರ್ಮಾಸ್ತ್ರ ಸಿಗದ ಕಾರಣಕ್ಕೆ ಕ್ಲೀನ್ ಇಮೇಜ್ ಅಭ್ಯರ್ಥಿಗಳ ಹೊಸ ಅಸ್ತ್ರ ಉಪಯೋಗಿಸುತ್ತಿದ್ದಾರೆ. ತೆರಿಗೆ ಅನ್ಯಾಯದ ವಿರುದ್ಧ ತಿರುಗಿಬಿದ್ದು ಪ್ರತ್ಯೇಕತೆಯ ಕೂಗೆಬ್ಬಿಸಿ, ದಕ್ಷಿಣ ಭಾರತದಲ್ಲೇ ದೊಡ್ಡ ಸಂಚಲನ ಮೂಡಿಸಿದ ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗೆ ಸರಿಸಾಟಿಯಾಗಬಲ್ಲ ಅಭ್ಯರ್ಥಿ ಯಾರು ? ಎಂದು ಹುಡುಕಿ ಸೋತು ಸುಣ್ಣವಾದ ಬಿಜೆಪಿ ನಾಯಕರು, ಪ್ರಧಾನಿಯ ಅಳಿಯನಾದರೂ, ತಮ್ಮ ಸೇವಾವಧಿಯಲ್ಲಿ ಎಲ್ಲಿಯೂ ರಾಜಕೀಯದ ಗಾಳಿ ಸೋಕದಂತೆ ಒಂದು ಸರಕಾರಿ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದ ಡಾ.ಸಿ.ಎನ್ ಮಂಜುನಾಥ್ ಅವರನ್ಮು ಇತ್ತೀಚಿನ ಕನ್ನಡ ಅಸ್ಮಿತೆಯ ಬ್ರ್ಯಾಂಡ್ ಆಗಿರುವ ಡಿ.ಕೆ.ಸುರೇಶ್ ಗೆ ಎದುರಾಳಿ ಮಾಡಲಾಗಿದೆ.

ಸಿದ್ದರಾಮಯ್ಯ ವಿರುದ್ಧ ಸಿಡಿಯುತ್ತಲೇ, ಸುಳ್ಳು ಮಾಹಿತಿಗಳ ಮೂಲಕವೇ ಸದ್ದು ಮಾಡುತ್ತಿದ್ದ ಮಾಜಿ ಪತ್ರಕರ್ತ ಮೈಸೂರಿನ ಸಂಸದ ಪ್ರತಾಪ್ ಸಿಂಹ, ಗ್ಯಾರಂಟಿಗಳ ಗುಂಗಿನಲ್ಲಿರುವ ಜನರ ಪ್ರೀತಿಯ ನಡುವೆ ಸಿದ್ದರಾಮಯ್ಯ ತವರೂರು ಗೆಲ್ಲುವುದು ಸುಲಭವಲ್ಲ ಎಂಬ ಕಾರಣಕ್ಕೆ ಮೈಸೂರಿನ ಮಹರಾಜರ ವಂಶಸ್ಥ, ರಾಜಸ್ಥಾನದ ಅಳಿಯ ಯದುವೀರ ಶ್ರೀಕಂಠದತ್ತ ಒಡೆಯರ್ ಅವರನ್ನು ರಾಜಕೀಯಕ್ಕೆ ಎಳೆದುತಂದು ರಾಜವಂಶಸ್ಥರ ಮೇಲೆ ಜನರಿಗಿರುವ ಗೌರವವನ್ನು ಗಳಿಸಿಕೊಂಡು ತಾನು ಮಾಡಿರುವ ತಪ್ಪುಗಳ ತೂತು ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.

ಸುಧಾಮೂರ್ತಿ ಅವರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಾಗಲೇ ಕರ್ನಾಟಕದಲ್ಲಿ ಇಂತಹದ್ದೊಂದು ಪ್ರಯತ್ನವಾಗುವ ಎಲ್ಲ ಮುನ್ಸೂಚನೆಗಳು ಸಿಕ್ಕಿದ್ದವು. ಸುಧಾಮೂರ್ತಿ, ಸಮಾಜಸೇವೆಯ ಮೂಲಕವೇ ಗುರುತಿಸಿಕೊಂಡಿದ್ದರೂ, ಬಿಜೆಪಿಗೆ ಹಿಂಬಾಗಿಲಿನಿಂದ ಸದಾ ಸರಕು ಪೂರೈಕೆಯ ಸಹಕಾರ ಮಾಡುತ್ತಲೇ ಇದ್ದವರು ಎಂಬುದು ಬಹಳ ದಿನಗಳ ಹಿಂದೆಯೇ ಕರ್ನಾಟಕದ ಜನರಿಗೆ ಗೊತ್ತಿತ್ತು. ಬಿಜೆಪಿ ಆಯ್ಕೆ ಮಾಡುವ ಇಂತಹ ಕ್ಲೀನ್ ಇಮೇಜ್ ನಾಯಕರಿಂದ ನಾಡಿಗೆ ಅದೇನು ಲಾಭವಾಗಿದೆ ಎಂಬುದನ್ನು ಕೂಡ ಕರ್ನಾಟಕದ ಜನತೆ ಅರ್ಥ ಮಾಡಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ 28ರಲ್ಲಿ 25 ಸ್ಥಾನ ಗೆದ್ದಿದ್ದರೂ ಕರ್ನಾಟಕಕ್ಕೆ ಬಿಜೆಪಿ ಆಡಳಿತದಲ್ಲಿದ್ದಾಗಲೂ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಇದನ್ನು ಪ್ರಶ್ನಿಸದೆ, ಅಷ್ಟೂ ಎಂಪಿಗಳು ತುಟಿಮುಚ್ಚಿ ಕೊಂಡಿದ್ದಲ್ಲದೇ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯನಂತಹವರು ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆಯೇ ಶೂನ್ಯ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಕಾವೇರಿ ವಿವಾದ, ಮಹದಾಯಿ ವಿಚಾರ, ಬೆಳಗಾವಿ ಗಡಿ ಸಮಸ್ಯೆಯಂತಹ ವಿಚಾರಗಳಲ್ಲಿ ಬಿಜೆಪಿ ಸಂಸದರದ್ದು ಸುದೀರ್ಘ ಮೌನ ಎನ್ನಬಹುದು. ಪ್ರಸ್ತುತ ಪ್ರಾದೇಶಿಕತೆಯ ವಿವೇಚನೆ ಜಾಗೃತವಾಗಿರುವ ಕನ್ನಡಿಗರ ಮುಂದೆ ಧರ್ಮ, ಭಾವನಾತ್ಮಕ ವಿಚಾರಗಳು ನಡೆಯುವುದಿಲ್ಲ ಎಂದರಿತ ಬಿಜೆಪಿ, ಕ್ಲೀನ್ ಇಮೇಜ್ ಎನಿಸಿಕೊಂಡವರನ್ನು ಕಣಕ್ಕಿಳಿಸಿ, ಅಭ್ಯರ್ಥಿಗಳ ಮೇಲಿನ ಗೌರವವನ್ನು ತನ್ನ ವೋಟ್ ಬ್ಯಾಂಕ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದೆ.

ಒಳ್ಳೆಯವರ ಒಳ್ಳೆತನ ಕರುನಾಡಿಗೆ ರಾಜಕೀಯವಾಗಿ ಏನು ಲಾಭ ತಂದುಕೊಡಲಿದೆ ಎಂಬ ಸಂಪೂರ್ಣ ಅರಿವಿರುವ ಕರ್ನಾಟಕದ ಮತದಾರ ಇಮೇಜಿಗೆಲ್ಲ ಮತ ಕೊಡಲಾರ ಎಂಬುದು ರಾಜಕೀಯ ವಿಶ್ಲೇಷಕ ವಲಯದ ಅಭಿಪ್ರಾಯ. ಬಿಜೆಪಿ ನಾಯಕರ ಬಣ್ಣದ ಮಾತು ನಂಬಿಯೋ, ತಮ್ಮ ಭವಿಷ್ಯದ ಭದ್ರತೆಗಾಗಿಯೇ ಅಭ್ಯರ್ಥಿಗಳಾಗಿರುವ ಕ್ಲೀನ್ ಇಮೇಜ್ ಐಕಾನ್ ಗಳೆಲ್ಲ ಇಡೀ ರಾಜ್ಯದ ಆಸ್ತಿಯಾಗರದೆ, ಒಂದು ಪಕ್ಷದ ಅಭ್ಯರ್ಥಿಗಳಾಗುತ್ತಿರುವುದು ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಕೆಟ್ಟ ಸಂಪ್ರದಾಯ. ಇಡೀ ರಾಜ್ಯವೇ ಗೌರವಿಸುವ ಮೈಸೂರು ಮಹಾರಾಜರ ವಂಶಸ್ಥ ಯದುವೀರ್, ಬಡವರ ಪಾಲಿನ ಹೃದಯದ ದೇವರು ಎನಿಸಿಕೊಂಡಿದ್ದ ಡಾ.ಸಿ.ಎನ್.ಮಂಜುನಾಥ್, ದೇಶಾದ್ಯಂತ ಹೆಣ್ಣಮಕ್ಕಳ ಸ್ಫೂರ್ತಿಯಾಗಿದ್ದ, ಶೌಚಾಲಯ, ಗ್ರಂಥಾಲಯ ನಿರ್ಮಾಣದಲ್ಲಿ ದಾಖಲೆ ಬರೆದಿದ್ದ ಸುಧಾಮೂರ್ತಿ ಅವರು, ರಾಜಕೀಯ ಕಾರಣಕ್ಕಾಗಿಯಾದರೂ ಒಂದಷ್ಟು ಜನರ ಪ್ರೀತಿ, ಗೌರವ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿಜೆಪಿಯ ಈ ಹೊಸ ಪ್ರಯೋಗವನ್ನು ಪ್ರಜ್ಞಾವಂತ ಮತದಾರ ವರ್ಗ ಅದೇಗೆ ಸ್ವೀಕಾರ ಮಾಡುತ್ತೋ ಕಾದು ಕೋಡಬೇಕಿದೆ.


Share It

You cannot copy content of this page