ನವದೆಹಲಿ: ಬ್ಯಾಂಕ್ ನೌಕರರು ಪಡೆಯುವ ಬಡ್ಡಿರಹಿತ ಸಾಲ ಹಾಗೂ ರಿಯಾಯಿತಿ ಬಡ್ಡಿ ದರದ ಸಾಲಸೌಲಭ್ಯದ ಮೇಲೆ ಆದಾಯ ತೆರಿಗೆ ವಿಧಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರಿದ್ದ ವಿಭಾಗೀಯ ಪೀಠ, ಎಸ್‌ಬಿಐ ನಿಗದಿ ಮಾಡಿರುವ ಬಡ್ಡಿ ದರವನ್ನು ಮಾನದಂಡ ಎಂದು ಪರಿಗಣಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಬ್ಯಾಂಕ್‌ಗಳು ತಮ್ಮ ನೌಕರರಿಗೆ ನೀಡುವ ಬಡ್ಡಿರಹಿತ ಸಾಲಸೌಲಭ್ಯ ಹಾಗೂ ರಿಯಾಯಿತಿ ದರದ ಸಾಲಸೌಲಭ್ಯವನ್ನು ವಿಶೇಷ ಸೌಲಭ್ಯ ಎಂದು ಪರಿಗಣಿಸಿ, ಅವು ವಿಧಿಸುವ ದರವು ಎಸ್‌ಬಿಐ ನಿಗದಿ ಮಾಡಿರುವ ಬಡ್ಡಿದರಕ್ಕಿಂತ ಕಡಿಮೆಯಿದ್ದರೆ, ಅದರ ಮೇಲೆ ಆದಾಯ ತೆರಿಗೆ ವಿಧಿಸಬಹುದು ಎಂದು ಎಸ್‌ಬಿಐ ನಿಯಮ ರೂಪಿಸಿದೆ. ಇದನ್ನು ಪ್ರಶ್ನಿಸಿ ಬ್ಯಾಂಕ್ ಅಧಿಕಾರಿಗಳ ಸಂಘಗಳ ಒಕ್ಕೂಟ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಸಂಕೀರ್ಣ ಸಮಸ್ಯೆಯೊಂದನ್ನು ಒಂದೇ ಸೂತ್ರದ ಮೂಲಕ ಬಗೆಹರಿಸಲಾಗಿದೆ. ಇದಕ್ಕೆ ನ್ಯಾಯಾಂಗ ಸಮ್ಮತಿ ಸಊಚಿಸಬೇಕಾಗುತ್ತದೆ. ವಾಣಿಜ್ಯ ಮತ್ತು ತೆರಿಗೆ ಕಾನೂನುಗಳು ತೀರಾ ಸೂಕ್ಷ್ಮ ಮತ್ತು ಸಂಕೀರ್ಣವಾಗಿ ಇರುತ್ತವೆ. ದುರ್ಬಳಕೆ ತಡೆಯುವ ಮತ್ತು ನಿಶ್ಚಿತತೆಯನ್ನು ಹೆಚ್ಚಿಸುವ ಶಾಸನಗಳ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಬಯಸುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.