ಅಪರಾಧ ಸುದ್ದಿ

ಸಿಕ್ಕಿಂನಲ್ಲಿ ಸುರಂಗ ಕುಸಿತ: 7 ಮಂದಿ ಸಾವು; ಹಲವು ಕಾರ್ಮಿಕರು ಸಿಲುಕಿರುವ ಸಾಧ್ಯತೆ

Share It

ಗ್ಯಾಂಗ್ಟಾಕ್: ನಿರ್ಮಾಣ ಹಂತದ ಸುರಂಗ ಕುಸಿದು 7 ಜನ ಸಾವನ್ನಪ್ಪಿ ಸುರಂಗದೊಳಗೆ ಹಲವು ಕಾರ್ಮಿಕರು ಸಿಲುಕಿಕೊಂಡಿದ್ದು, ತೀವ್ರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಕ್ಕಿಂನ ನಾಮ್ಚಿ ಜಿಲ್ಲೆಯ ಜೋಲುಂಗೆಯ ಸಮರ್ದುಂಗ್‌ನಲ್ಲಿ ಘಟನೆ ಸಂಭವಿಸಿದೆ. ಸುರಂಗದೊಳಗೆ ಸುಮಾರು 27 ಕಾರ್ಮಿಕರು ಸಿಲುಕಿರುವ ಸಾಧ್ಯತೆಯಿದೆ. ಆದಾಗ್ಯೂ, ಸುರಂಗದೊಳಗಿನ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಬಂದಿಲ್ಲ. ಆದ್ದರಿಂದ, ಸರಿಯಾದ ಸಂಖ್ಯೆಯನ್ನು ದೃಢಪಡಿಸಲಾಗಿಲ್ಲ” ಎಂದು ನಾಮ್ಚಿ ಜಿಲ್ಲೆಯ ಜಿಲ್ಲಾಧಿಕಾರಿ ಅನುಪ ತಮ್ಲಿಂಗ್ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡವು ಸುರಂಗದೊಳಗೆ ಪ್ರವೇಶಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಎನ್‌ಡಿಆರ್‌ಎಫ್ ತಂಡ ಹಿಂದಿರುಗಿದ ನಂತರವೇ ಎಷ್ಟು ಕಾರ್ಮಿಕರು ಒಳಗೆ ಇದ್ದಾರೆ ಮತ್ತು ಅವರ ಸ್ಥಿತಿ ಏನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ಡಿಸಿ ಮಾಹಿತಿ ನೀಡಿದರು.

ಸಮರ್ಡಾಂಗ್‌ನ ಸುರಂಗದೊಳಗೆ ಸೋಮವಾರ ಮಧ್ಯಾಹ್ನ ಅನಿಲ ಸೋರಿಕೆ ಪ್ರಕರಣ ವರದಿಯಾಗಿತ್ತು. ಬಳಿಕ ಸುರಂಗದೊಳಗೆ ಕೆಲಸ ಮಾಡುತ್ತಿದ್ದ ಜನರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗಾಗಿ ಸಂಬಂಧಪಟ್ಟ ಸಂಸ್ಥೆಗಳನ್ನು ನಿಯೋಜಿಸಲಾಗಿದೆ. ಆದಾಗ್ಯೂ, ಸುರಂಗದೊಳಗೆ ನಿಖರವಾಗಿ ಏನಾಯಿತು ಮತ್ತು ಪ್ರಸ್ತುತ ಎಷ್ಟು ಜನರು ಅಲ್ಲಿ ಸಿಲುಕಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸಿಂಗ್ಟಮ್ ಜಿಲ್ಲಾ ಆಸ್ಪತ್ರೆ, ಗ್ಯಾಂಗ್ಟಾಕ್‌ನ ಎಸ್‌ಟಿಎನ್‌ಎಂ ಆಸ್ಪತ್ರೆ ಮತ್ತು ನಾಮ್ಚಿ ಜಿಲ್ಲಾ ಆಸ್ಪತ್ರೆಗೆ ಮೃತದೇಹಗಳನ್ನು ಸಾಗಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ನಾಮ್ಚಿ ಜಿಲ್ಲಾಡಳಿತ ಅಧಿಕಾರಿಗಳು, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ. ಎಸ್‌ಎಸ್‌ಡಿಎಂಎ ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.


Share It

You cannot copy content of this page