ರಾಜಕೀಯ ಸುದ್ದಿ

ರಾಜ್ಯದ ಮತದಾರರು ಬಿಜೆಪಿಗೆ ಅಧಿಕಾರ ನೀಡಿಲ್ಲ, ಇದರಿಂದ ಮೋದಿ,ಅಮಿತ್ ಶಾಗೆ ಸಿಟ್ಟು

Share It

ವಿಜಯಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿಗೆ ವೋಟ್ ಹಾಕಿ ಅಧಿಕಾರ ನೀಡಿಲ್ಲ, ಇದರಿಂದಲೇ ಮೋದಿ, ಅಮಿತ್ ಶಾ ಅವರಿಗೆ ಕರ್ನಾಟಕವೆಂದರೆ ಅಸಡ್ಡೆ, ವಿಪರೀತ ಕೋಪ ಎಂದು ಸಚಿವ ರಾಮಲಿಂಗಾರೆಡ್ಡಿ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ, ಪ್ರತಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಕೇಂದ್ರ ಸರ್ಕಾರ ಬರಪರಿಹಾರ ನೀಡಿಲ್ಲ, ರಾಜ್ಯದ ಪಾಲಿನ ಜಿಎಸ್ ಟಿ ನೀಡದೇ ಅನ್ಯಾಯ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸೋಲಿನ ಆಘಾತದಿಂದ ಅವರಿನ್ನೂ ಹೊರಬಂದಿಲ್ಲ, ಆದ್ದರಿಂದ ರಾಜಕೀಯ ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಪಾದಿಸಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವ ಇಲ್ಲ ಎಂದು ಕೇವಲ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಅನುದಾನ, ಆದ್ಯತೆ ನೀಡಲಾಗುತ್ತಿದೆ, ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಎಸಗುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಆರೋಪಿಸಿದರು.

ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಕೇಂದ್ರ ಸರ್ಕಾರದ ಬಳಿ ಧ್ವನಿ ಎತ್ತಲು ರಾಜ್ಯದ ಹಾಲಿ 27 ಬಿಜೆಪಿ, ಜೆಡಿಎಸ್ ಸಂಸದರು ಒಮ್ಮೆಯೂ ಪ್ರಯತ್ನಿಸಿಲ್ಲ, ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಹೆಚ್ಚಿನ ಸಂಸದರು ಕಾಂಗ್ರೆಸ್ ಪಕ್ಷದಿಂದಲೇ ಆಯ್ಕೆಯಾದರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪುತ್ರ ರಾಕೇಶ್ ಸಿದ್ದರಾಮಯ್ಯ ವಿದೇಶದಲ್ಲಿ ತೀರಿಕೊಂಡಾಗ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಪ್ರಧಾನಿ ಮೋದಿ ಅವರಿಂದಾಗಲಿ, ಬಿಜೆಪಿ ಸರ್ಕಾರದಿಂದಾಗಲಿ ಯಾವುದೇ ಸಹಾಯ ಪಡೆದಿರಲಿಲ್ಲ, ಈ ಬಗ್ಗೆ ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ, ಬಹುಶಃ ಅವರು ಈ ರೀತಿ ಆರೋಪ ಮಾಡಿದರೆ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಟೀಕೆ ನಿಲ್ಲಿಸಬಹುದು ಎಂದು ಹೀಗೆ ಹೇಳಿದ್ದಾರೆ ಎಂದು ವಿಡಂಬನೆ ಮಾಡಿದರು.

ಬಿಜೆಪಿಯವರು ಮಹಿಳಾ ವಿರೋಧಿಗಳು, ಮಣಿಪುರದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದಾಗ ಮತ್ತು ಹಾಸನದಲ್ಲಿ ನೊಂದಿರುವ ಮಹಿಳೆಯರ ಪರ ಧ್ವನಿ ಎತ್ತದ ಅಮಿತ್ ಶಾ ಅವರ ಮಾತೃಶಕ್ತಿ ಎಲ್ಲಿ ಹೋಯ್ತಪ್ಪಾ ಎಂದು ಹೀಯಾಳಿಸಿದರು.

ಮೋದಿ ಅವರು ಬೆಂಗಳೂರು ಬಾಂಬ್ ಸ್ಫೋಟದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಬಿಜೆಪಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿ ಒಟ್ಟು 6 ಬಾರಿ ಬಾಂಬ್ ಸ್ಫೋಟಗಳಾಗಿತ್ತು. ಆ ಬಗ್ಗೆ ಏಕೆ ಮೋದಿ ಬಾಯಿ ಬಿಡುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ.ಮಹಾಂತೇಶ ಬಿರಾದರ, ಅಬ್ದುಲ್ ಹಮೀದ್ ಮುಶ್ರೀಫ್, ವಕೀಲ ಸುಭಾಶ ಛಾಯಗೋಳ ಉಪಸ್ಥಿತರಿದ್ದರು


Share It

You cannot copy content of this page