ಭಾರತ ತೊರೆಯುತ್ತೇವೆ ಎಂದ ವಾಟ್ಸಪ್!
ನಿಯಮ ಪಾಲಿಸಲು ಆಗಲ್ಲ ಎಂದ ಮೆಸೆಜಿಂಗ್ ಆಪ್
ನವದೆಹಲಿ: ಕೇಂದ್ರ ಸರ್ಕಾರದ ಐಟಿ ನಿಯಮದ ವಿರುದ್ಧ ಮುನಿಸಿಕೊಂಡಿರುವ ಜನಪ್ರಿಯ ಚಾಟಿಂಗ್ ಆಪ್ ವಾಟ್ಸಪ್, ಈ ನಿಯಮ ಪಾಲಿಸಲು ಸಾಧ್ಯವಿಲ್ಲ ಭಾರತ ತೊರೆಯುತ್ತೇವೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದೆ.
ಹೌದು ವಾಟ್ಸಪ್ ಬಗ್ಗೆ ದೇಶದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಭಾರತದಾದ್ಯಂತ ಸಂಚಲನ ಮೂಡಿಸಿದೆ. ಅಮೆರಿಕ ಮೂಲದ ಮೆಟಾ ಕಂಪನಿಯ ವಾಟ್ಸಾಪ್ ಈಗ ಕೇಂದ್ರ ಸರ್ಕಾರದ ಐಟಿ ನಿಯಮದ ವಿರುದ್ಧ ಮುನಿಸಿಕೊಂಡಿದ್ದು, ಕೋರ್ಟ್ ಮೆಟ್ಟಿಲೇರಿದೆ. ಜಾಲತಾಣಗಳ ಅಪಾಯಕ್ಕೆ ಕಡಿವಾಣ ಹಾಕುವ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳೂ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ- ೨೦೨೧’ ಜಾರಿ ಮಾಡಿದೆ. ಇದಕ್ಕೆ ಚಾಟಿಂಗ್ ಆಪ್ ವಾಟ್ಸಪ್ ವಿರೋಧ ವ್ಯಕ್ತಪಡಿಸಿದೆ.
ಮಾಹಿತಿ ತಂತ್ರಜ್ಞಾನ ನಿಯಮ-೨೦೨೧ರಲ್ಲಿ ಏನಿದೆ?
ಭಾರತದಲ್ಲಿ ೫೦ ಲಕ್ಷಕ್ಕಿಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಸರ್ಕಾರ ಕೇಳಿದಾಗ ಮಾಹಿತಿಯ ಮೂಲದ ವಿವರ ನೀಡಬೇಕು. ಅಂದರೆ, ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಒಂದು ಸಂದೇಶವನ್ನು ಮೊದಲು ಸೃಷ್ಟಿದವರ ವಿವರವನ್ನು ನೀಡಬೇಕು. ಇದರಿಂದಾಗಿ ಸುಳ್ಳು ಸುದ್ದಿ, ಪ್ರಚೋದನಕಾರಿ ಬರಹಗಳ ಮೂಲವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಆದರೆ ಈ ನಿಯಮಕ್ಕೆ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಡೋಂಟ್ ಕೇರ್ ಎಂದಿವೆ. ವಾಟ್ಸಪ್ ಸಹ ಕೋರ್ಟ್ ಮೆಟ್ಟಲೇರಿದ್ದು, ಈ ನಿಯಮ ಪಾಲಿಸಲು ಸಾಧ್ಯವಿಲ್ಲ, ಇದನ್ನು ಕಡ್ಡಾಯ ಮಾಡಿದಲ್ಲಿ ಭಾರತವನ್ನೇ ತೊರೆಯುತ್ತೇವೆ ಎಂದು ವಾಟ್ಸಪ್ ಹೇಳಿದೆ.
ಮೆಸೆಜಿಂಗ್ ಅಪ್ಲಿಕೇಶನ್ ಗಳ ವಾದವೇನು?
ವಾಟ್ಸಪ್ ಸೇರಿದಂತೆ ಬಹುತೇಕ ಮೆಸೆಜಿಂಗ್ ಅಪ್ಲಿಕೇಶನ್ ಗಳು ಮಾಹಿತಿ ತಂತ್ರಜ್ಞಾನ ನಿಯಮ-೨೦೨೧ ಅನ್ನು ಒಪ್ಪುತ್ತಿಲ್ಲ. ಮೆಸೆಜಿಂಗ್ ಅಪ್ಲಿಕೇಶನ್‌ಗಳು ಮಾಹಿತಿ ಹಾಗೂ ಮೂಲವನ್ನು ಕೊಡಲು ಒಪ್ಪಿಕೊಂಡರೆ ಬಳಕೆದಾರರು ಅಪ್ಲಿಕೇಶನ್ ಬಳಕೆಯನ್ನೇ ನಿಲ್ಲಿಸುವ ಸಾಧ್ಯತೆ ಇದೆ. ಅಲ್ಲದೆ ಬಳಕೆದಾರರ ಖಾಸಗಿತನ ಹರಣವಾಗಲಿದೆ. ಬಳಕೆದಾರರ ಖಾಸಗಿತನ ಮತ್ತು ಮಾಹಿತಿಯನ್ನು ರಕ್ಷಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವ ಅಪ್ಲಿಕೇಶನ್‌ಗಳ ವಿಶ್ವಾಸಾರ್ಹತೆಯೂ ಕುಸಿಯುತ್ತದೆ. ಹೀಗಾಗಿ ವಾಟ್ಸಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ಸರ್ಕಾರದ ಹೊಸ ನಿಯಮದ ವಿರುದ್ಧ ದೆಹಲಿ ಹೈ ಕೋರ್ಟ್ ಮೆಟ್ಟಿಲೇರಿದೆ.
ವಾಟ್ಸಪ್ ಬಳಕೆದಾರರು ಎಷ್ಟು ಗೊತ್ತಾ?
ಪ್ರಪಂಚದಾದ್ಯAತ ೨೦೦ ಕೋಟಿಗೂ ಹೆಚ್ಚು ಬಳಕೆದಾರರನ್ನು ವಾಟ್ಸಪ್ ಹೊಂದಿದೆ. ಭಾರತದಲ್ಲೇ ಸುಮಾರು ೫೦ ಕೋಟಿ ಜನ ವಾಟ್ಸಪ್ ಬಳಸುತ್ತಿದ್ದಾರೆ. ಇಷ್ಟು ಜನಪ್ರಿಯ ಅಪ್ಲಿಕೇಷನ್ ಭಾರತ ತೊರೆಯುತ್ತಾ ಎಂಬ ಆತಂಕ ಈಗ ಬಳಕೆದಾರರಲ್ಲಿ ಕಾಡುತ್ತಿದೆ. ಏಕೇಂದರೆ ವಾಟ್ಸಪ್ ಭಾರತದಲ್ಲಿ ಬಹುತೇಕರ ಅಚ್ಚುಮೆಚ್ಚಿನ ಚಾಟಿಂಗ್ ಅಪ್ಲಿಕೇಷನ್ ಎನ್ನುವುದಲ್ಲಿ ಅನುಮಾನವಿಲ್ಲ. ವಾಟ್ಸಪ್ ಬಳಕೆ ಸುಲಭ ಹಾಗೂ ಸೆಕ್ಯೂರ್ ಎಂದು ಬಳಕೆದಾರಸ್ನೇಹಿಯಾಗಿದೆ. ಸರ್ಕಾರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೆ? ವಾಟ್ಸಪ್ ನಿಜವಾಗಿಯೂ ಭಾರತ ತೊರೆಯುತ್ತಾ ಕಾದು ನೋಡಬೇಕಿದೆ.