ಸುದ್ದಿ

ಪೊಲೀಸರಿಗೆ ತಲೆನೋವಾದ ಹೈಕೋರ್ಟ್ ವಕೀಲೆ ಚೈತ್ರಾ ಆತ್ಮಹತ್ಯೆ ಕೇಸ್

Share It

ಬೆಂಗಳೂರು: ನಗರದಲ್ಲಿ ಇಂದು ಹೈಕೋರ್ಟ್‌ ವಕೀಲೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವಕೀಲೆಯ ಪತಿ ಕೆಎಎಸ್‌ ಅಧಿಕಾರಿ ಆಗಿದ್ದು, ಮನೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಚೈತ್ರಾ ಮೃತ ಹೈಕೋರ್ಟ್ ವಕೀಲೆ. ಪತಿ ಶಿವಕುಮಾರ್‌ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಶಿವಕುಮಾರ್‌ ಮನೆಗೆ ವಾಪಸ್‌ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

2016ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ 5 ವರ್ಷದ ಒಂದು ಮಗು ಇದೆ. ಈ ದಂಪತಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಚೈತ್ರಾ ಗೌಡ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದರು. ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ನಲ್ಲಿ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತ ಚೈತ್ರಾ ಅವರ ತಮ್ಮ ವಾಸವಾಗಿದ್ದರು. ಇಂದು ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನ ಜೊತೆ ಚೈತ್ರಾ ಮಾತನಾಡಿದ್ದಾರೆ. ಬಳಿಕ ಬೆಳಗ್ಗೆ 11 ಗಂಟೆ ಸುಮಾರಿಗೆ ಚೈತ್ರಾ ಅವರನ್ನು ಮನೆಯಲ್ಲಿ ತಮ್ಮ ಕರೆದಾಗ ಸ್ಪಂದಿಸಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ಚೈತ್ರಾ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಚೈತ್ರಾ ಹೈಕೋರ್ಟ್‌ ವಕೀಲರಾಗಿರುವುದರಿಂದ ಯಾವುದಾದರೂ ಪ್ರಕರಣದಲ್ಲಿ ಯಾರಾದರೂ ಬೆದರಿಕೆ ಹಾಕಿದ್ದರಾ? ಅಥವಾ ಕುಟುಂಬದಲ್ಲೇ ಏನಾದರೂ ಕಲಹ ಇತ್ತಾ? ಎಂಬ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಜಯ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು,‌ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

ಚೈತ್ರಾ ಬರೆದ ಡೆತ್ ನೋಟ್ ಪತ್ತೆ!
ಇದಾದ ನಂತರ ಮೃತ ಚೈತ್ರಾರ ಬೆಡ್‌ ರೂಮಿನಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದೆ. ಆದರೆ 3 ತಿಂಗಳ ಹಿಂದೆ ಅಂದರೆ ಮಾರ್ಚ್ 11ರಂದು ಬರೆದಿದ್ದ ಡೆತ್ ನೋಟ್ ಸಿಕ್ಕಿದೆ. ಮೇಲ್ನೋಟಕ್ಕೆ ಹಿಂದೊಮ್ಮೆಯೂ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದರಾ? ಎಂಬ ಅನುಮಾನ ಮೂಡಿದೆ.

ಇನ್ನು ಡೆತ್‌ನೋಟ್‌ನಲ್ಲಿ ಮೃತ ಚೈತ್ರಾ ಹೀಗೆ ಬರೆದಿದ್ದಾರೆ…
ನನ್ನ ಪತಿ ತುಂಬಾ ಒಳ್ಳೆಯವರು, ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ, ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ.. ಆದರೆ ಆಗುತ್ತಿಲ್ಲ, ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನಕ್ಕೆ ಅಂತ್ಯವಾಡಿದ್ದೇನೆ ಎಂದು ಚೈತ್ರಾ ಪತ್ರ ಬರೆದಿದ್ದಾರೆ. ಇನ್ನು ಯಾವ ವಿಚಾರಕ್ಕೆ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು? ಎಂಬುದು ತಿಳಿದುಬಂದಿಲ್ಲ.

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ‘ಕೆಎಎಸ್ ಅಧಿಕಾರಿಯ ಪತ್ನಿ ಚೈತ್ರಾ ಎಂಬುವವರು ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮನೆಯಲ್ಲಿ ಡೆತ್ ನೋಟ್‌ವೊಂದು ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿರುವುದು ಗೊತ್ತಾಗಿದೆ. ಆದರೆ ನೋಟ್‌ ಅನ್ನು ಅವರೇ ಬರೆದಿದ್ದಾ? ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ವರದಿ ಬಂದ ನಂತರ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ ಎಂದು ಹೇಳಿದ್ದಾರೆ.


Share It

You cannot copy content of this page