ರೇಣುಕಾಸ್ವಾಮಿ ಪ್ರಕರಣ: ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಪತಿಯನ್ನು ರಕ್ಷಿಸುವ ಉದ್ದೇಶದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದಲ್ಲಿ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗುವುದನ್ನು ಮತ್ತು ಆತನ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಶ್ನಿಸಿ ವಿಜಯಲಕ್ಷ್ಮಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ನ್ಯಾಯಾಲಯಕ್ಕೆ ಈ ರೀತಿಯ ಹೇಳಿಕೆ ದಾಖಲಿಸಿಕೊಳ್ಳುವ ಅಧಿಕಾರವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು.
ದರ್ಶನ್ ಪರ ಹಿರಿಯ ವಕೀಲ ನಾಗಮುತ್ತು ಅವರು ವಾದ ಮಂಡಿಸಿ, ಮಾಫಿ ಸಾಕ್ಷಿ ಹೇಳಿಕೆ ವಿಚಾರದಲ್ಲಿ ಕೇವಲ ಪ್ರಿನ್ಸಿಪಲ್ ಕೋರ್ಟ್ಗೆ ಮಾತ್ರ ಅಧಿಕಾರವಿದ್ದು, ವಿಚಾರಣಾ ನ್ಯಾಯಾಲಯಕ್ಕೆ ಈ ಅಧಿಕಾರವಿಲ್ಲ ಎಂದು ವಾದಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಪರ್ದಿವಾಲಾ ಪೀಠ, ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳುವ ಸಂಪೂರ್ಣ ಅಧಿಕಾರ ಸೆಷನ್ಸ್/ಟ್ರಯಲ್ ಕೋರ್ಟ್ಗೆ ಇದೆ ಎಂದು ಸ್ಪಷ್ಟಪಡಿಸಿತು. ಟ್ರಯಲ್ ಕೋರ್ಟ್ಗೆ ಅಧಿಕಾರವಿಲ್ಲ ಎಂಬ ವಾದವನ್ನು ಒಪ್ಪಲಾಗದು ಎಂದು ಪೀಠ ಕಟುವಾಗಿ ಹೇಳಿತು.
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಅವರು, ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳುವುದನ್ನು ಪ್ರಶ್ನಿಸುವ ಹಕ್ಕು ಆರೋಪಿಗಳಿಗೆ ಇರುವುದಿಲ್ಲ. ಆದರೆ ಆ ಸಾಕ್ಷಿಯನ್ನು ಪಾಟಿಸವಾಲಿಗೆ ಒಳಪಡಿಸುವ ಹಕ್ಕು ಆರೋಪಿಗಿದೆ ಎಂದು ಪೀಠದ ಗಮನಕ್ಕೆ ತಂದರು.
ಸರ್ಕಾರದ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಆರೋಪಿಗೆ ಕೇವಲ ಪಾಟಿಸವಾಲು ನಡೆಸುವ ಹಕ್ಕಿದೆಯೇ ಹೊರತು, ಮಾಫಿ ಸಾಕ್ಷಿಯ ಪ್ರಕ್ರಿಯೆಯನ್ನೇ ವಿರೋಧಿಸಲು ಅಥವಾ ಪ್ರಶ್ನಿಸಲು ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿತು. ಈ ಆದೇಶದಿಂದ ಪ್ರಕರಣದಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲಾತಿಗೆ ಇದ್ದ ಕಾನೂನು ಅಡ್ಡಿ ನಿವಾರಣೆಯಾಗಿದೆ.
