ಸುದ್ದಿ

ನೇಪಾಳ ಪ್ರವಾಹಕ್ಕೆ 157 ಮಂದಿ ಬಲಿ; ತಮಿಳುನಾಡಿನ 37, ಪಶ್ಚಿಮ ಬಂಗಾಳದ 32 ಪ್ರವಾಸಿಗರು ನಾಪತ್ತೆ

Share It

ನವದೆಹಲಿ: ನೇಪಾಳದಲ್ಲಿ ಹಠಾತ್ ಪ್ರವಾಹ ಉಂಟಾಗಿ ಮಹಾ ವಿನಾಶವನ್ನೇ ತಂದಿದೆ. ಹೀಗಾಗಿ ಇಲ್ಲಿನ ಬಹುತೇಕ ಜಿಲ್ಲೆಗಳು ಸಂಪರ್ಕ ಕಳೆದುಕೊಂಡಿವೆ. ಪ್ರವಾಹಕ್ಕೆ ಸಿಲುಕಿ ಇದುವರೆಗೆ 157 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.

ನೂರಾರು ಜನರ ಸುಳಿವು ಸಿಗುತ್ತಿಲ್ಲ. ಮತ್ತೊಂದು ಕಡೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅನೇಕ ಯಾತ್ರಿಕರು ಸೇರಿದಂತೆ 130 ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ಹಲವಾರು ಪ್ರವಾಸಿಗರು ನೇಪಾಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ಸಂತ್ರಸ್ತರಿಗೆ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿಗಳನ್ನು ಪ್ರಾರಂಭಿಸಿದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕನಿಷ್ಠ 59 ಭಾರತೀಯರು ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಾಮ್ರಾಟ್ ಟೂರ್ಸ್ ಮತ್ತು ಟ್ರಾವೆಲ್ ಏಜೆನ್ಸಿ ತಿಳಿಸಿದೆ. ನೇಪಾಳದಲ್ಲಿನ ತೀವ್ರ ಪ್ರವಾಹವು ಸಂವಹನ ಸಂಪರ್ಕಕ್ಕೂ ಅಡ್ಡಿಯಾಗಿರುವುದರಿಂದ ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳ ವಿವರಗಳನ್ನು ಪಡೆದುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ.

ಸಂಕಷ್ಟದಲ್ಲಿ ತಮಿಳುನಾಡು ಪ್ರವಾಸಿಗರು:ತಮಿಳುನಾಡಿನ 57 ಪ್ರವಾಸಿಗರಲ್ಲಿ 37 ಮಂದಿ ಎಲ್ಲಿದ್ದಾರೆ ಎಂಬ ಸುಳಿವು ಹಾಗೂ ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ, ಇತರ 20 ಜನರ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಸಿಗರು ಹಿಮಾಲಯದಲ್ಲಿರುವ ದೇವಾಲಯವೊಂದಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.


Share It

You cannot copy content of this page