ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರನ್ನು ಸೇವೆಯಿಂದ ವಜಾಗೊಳಿಸುವ ಅಧಿಕಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ)ಗೆ ಇಲ್ಲ ಎಂದು ಹೈಕೋರ್ಟ್ ಇಂದು ಸ್ಪಷ್ಟಪಡಿಸಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಖಂಡಕಿ ಗ್ರಾಮ ಪಂಚಾಯಿತಿಯ ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ಪ್ರವೀಣ್ ಹಂಚಿನಾಳ ಎಂಬವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಮತ್ತು ನ್ಯಾ.ಎಂ.ಬೃಂಗೇಶ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993ರ ಸೆಕ್ಷನ್ 113(3)ರ ಪ್ರಕಾರ ನೌಕರರನ್ನು ತೆಗೆದುಹಾಕುವ ಸಂಪೂರ್ಣ ಅಧಿಕಾರ ಕೇವಲ ಗ್ರಾಮ ಪಂಚಾಯಿತಿಗೆ ಮಾತ್ರ ಇರಲಿದೆ ಎಂದು ಪೀಠ ಹೇಳಿದೆ.
ಕಾಯ್ದೆಯನ್ವಯ ಗ್ರಾಮ ಪಂಚಾಯಿತಿ ನೌಕರರ ನೇಮಕಾತಿ ಅಥವಾ ವಜಾ ಪ್ರಕ್ರಿಯೆಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಸಿಇಒ ಹೊರಡಿಸಿದ್ದ ವಜಾ ಆದೇಶವು ಕಾನೂನುಬಾಹಿರ ಮತ್ತು ಅವರ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ತಿಳಿಸಿ ಸಿಇಒ ನೀಡಿದ್ದ ವಜಾ ಆದೇಶವನ್ನು ರದ್ದುಪಡಿಸಿತು.
ಪಂಚಾಯಿತಿಯಲ್ಲಿ 2021ರಿಂದ ಸ್ಥಗಿತಗೊಂಡಿರುವ ಹೊಸ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿದಾರರು ಭಾಗವಹಿಸಲು ನ್ಯಾಯಾಲಯ ಮುಕ್ತ ಅವಕಾಶ ಕಲ್ಪಿಸಿದೆ. ಅವರ ಅರ್ಜಿಯನ್ನು ಸ್ವೀಕರಿಸಿ, ವಯೋಮಿತಿ ಸಡಿಲಿಕೆ ಮತ್ತು ಸೇವಾ ಅನುಭವದ ವೆಯ್ಟೇಜ್ ನೀಡಿ ನೇಮಕಾತಿಯಲ್ಲಿ ಅವಕಾಶ ನೀಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ : ಕಖಂಡಕಿ ಗ್ರಾಮ ಪಂಚಾಯಿತಿಯು 2015ರಲ್ಲಿ ಪ್ರವೀಣ್ ಅವರನ್ನು ಡೇಟಾ ಎಂಟ್ರಿ ಆಪರೇಟರ್ ಆಗಿ ನೇಮಕ ಮಾಡಿತ್ತು. ಆದರೆ, 2018ರಲ್ಲಿ ಅಧಿಕಾರಕ್ಕೆ ಬಂದ ಹೊಸ ಪಂಚಾಯಿತಿ ಆಡಳಿತ ಮಂಡಳಿಯು ಹಳೇ ನಿರ್ಣಯಗಳನ್ನು ರದ್ದುಪಡಿಸಿ ಪ್ರವೀಣ್ ಸೇರಿದಂತೆ 9 ಜನರನ್ನು ಕೆಲಸದಿಂದ ತೆಗೆಯಲು ನಿರ್ಣಯಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು ನಿಯಮಾನುಸಾರ ಕ್ರಮ ಕೈಗೊಳ್ಳಲು ಜಿ.ಪಂ. ಸಿಇಒಗೆ ಸೂಚಿಸಿತ್ತು. ಅದರಂತೆ ವಿಜಯಪುರ ಜಿ.ಪಂ.ಸಿಇಒ ಅವರು 2021ರ ಜೂನ್ 18ರಂದು ಪ್ರವೀಣ್ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿದ್ದರಿಂದ, ಅರ್ಜಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

