ಅಪರಾಧ ಸುದ್ದಿ

ಬೆಂಗಳೂರು: ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ; ಸಿವಿಲ್ – ಸಾಫ್ಟ್‌ವೇರ್ ಇಂಜಿನಿಯರ್ ದಂಪತಿ ಶವವಾಗಿ ಪತ್ತೆ

Share It

ಬೆಂಗಳೂರು: ನಾಲ್ಕು ವರ್ಷದ ಹಿಂದೆ ಪ್ರೀತಿಸಿ ಮದುವೆ; ಸಿವಿಲ್ – ಸಾಫ್ಟ್‌ವೇರ್ ಇಂಜಿನಿಯರ್ ದಂಪತಿ ಶವವಾಗಿ ಪತ್ತೆ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮನೆಯಲ್ಲಿಯೇ ಶವವಾಗಿ ಪತ್ತೆಯಾದ ಘಟನೆ ನಗರದ ರಾಜಗೋಪಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಮಂತ್ ಜೈನ್ (32) ಹಾಗೂ ಹುಬ್ಬಳ್ಳಿ ಮೂಲದ ಪದ್ಮಾವತಿ (29) ಮೃತ ದಂಪತಿ.

ಸುಮಂತ್ ನಂದಿನಿ ಲೇಔಟ್‌ನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರ ಪತ್ನಿ ಪದ್ಮಾವತಿ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪರಸ್ಪರ ಪ್ರೀತಿಸಿದ್ದ ಸುಮಂತ್ ಜೈನ್, ಪದ್ಮಾವತಿ ನಾಲ್ಕು ವರ್ಷದ ಹಿಂದೆ ಮನೆಯಲ್ಲಿ ಒಪ್ಪಿಸಿ ಮದುವೆಯಾಗಿದ್ದರು. ಲಗ್ಗೆರೆ ಬಳಿಯ ರಾಜೇಶ್ವರಿ ನಗರದ ಬ್ಯಾಂಕ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ (ಆ.14) ಮಧ್ಯಾಹ್ನ ಮನೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸುಮಂತ್ ಜೈನ್ ತನ್ನ ಪತ್ನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಇಬ್ಬರ ಸಾವಿಗೆ ನಿಖರ ತಿಳಿದು ಬಂದಿಲ್ಲ. ಅವರ ಪಾಲಕರಿಗೆ ಮಾಹಿತಿ ತಿಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಂಪತಿ ನಡುವೆ ಆಗಸ್ಟ್ 13ರಿಂದಲೇ ಜಗಳ ನಡೆದಿತ್ತು. ಆ ಸಂದರ್ಭದಲ್ಲಿ ತನ್ನ ತಾಯಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದ ಪದ್ಮಾವತಿ, ‘ಅಮ್ಮ ನಾನು ಸಾಯುತ್ತೇನೆ. ಮದುವೆ ವೇಳೆ ನನಗೆ ನೀಡಿದ್ದ ಚಿನ್ನದ ಒಡವೆ ತೆಗೆದುಕೊಂಡು ಹೋಗಿ’ ಎಂದು ಸಂದೇಶ ರವಾನಿಸಿದ್ದರು ಎಂದು ತಿಳಿದುಬಂದಿದೆ. 

ಇತ್ತ ಸುಮಂತ್ ಜೈನ್ ಸಹ ‘ನನ್ನ ಪಿಎಫ್ ಹಣ, ಮನೆಯಲ್ಲಿರುವ ನನ್ನ ವಸ್ತು ನೀವೇ ತೆಗೆದುಕೊಂಡು ಹೋಗಿ. ನಾನು ಸಾಯುತ್ತಿದ್ದೇನೆ. ಈ ಮನೆ ನನ್ನದು ನನ್ನದು ಎಂದು ಹೇಳಿಕೊಂಡು ಹೆಂಡತಿ ಜಗಳ ಮಾಡುತ್ತಿದ್ದಾಳೆ’ ಎಂದು ಸಂದೇಶ ಕಳುಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Share It

You cannot copy content of this page