ಉಪಯುಕ್ತ ಸುದ್ದಿ

ಗೌರಿ ಗಣೇಶ ಹಬ್ಬಕ್ಕೆ KSRTC ಸಿಹಿ ಸುದ್ದಿ: ಸಾರ್ವಜನಿಕರ ಪ್ರಯಾಣಕ್ಕೆ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

Share It

ಬೆಂಗಳೂರು: ​ಗೌರಿ – ಗಣೇಶ ಹಬ್ಬದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿದೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಹಾಗೂ ನೆರೆ ರಾಜ್ಯಗಳಿಗೆ ಒಟ್ಟು 2,400 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ ಆರಂಭಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

​ಸೆಪ್ಟೆಂಬರ್ 11ರಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಆರಂಭವಾಗಿದ್ದು 12 ಹಾಗೂ 13ರವರೆಗೂ ಬೆಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಸಂಚರಿಸಲಿವೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದ ಕಡೆಗಳಿಗೆ ಬಸ್‌ಗಳು ಲಭ್ಯವಿರಲಿವೆ. ಇದರ ಜೊತೆಗೆ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಪ್ರಮುಖ ಸ್ಥಳಗಳಿಗೂ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 

ಮೈಸೂರು ರಸ್ತೆಯ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಮಾರ್ಗವಾಗಿ ವಿಶೇಷ ಬಸ್‌ಗಳು ಸಂಚರಿಸಲಿವೆ.​ ಅಲ್ಲದೇ, ಶಾಂತಿನಗರದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನಿಲ್ದಾಣದಿಂದ ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚ್ಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಹಾಗೂ ಕೋಝಿಕ್ಕೋಡ್ ಮುಂತಾದ ನಗರಗಳಿಗೆ ಪ್ರತ್ಯೇಕ ಬಸ್‌ಗಳು ಹೊರಡಲಿವೆ. ಹಬ್ಬ ಮುಗಿದ ನಂತರ ಸೆಪ್ಟೆಂಬರ್ 14ರಂದು ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಭಾಗಗಳಿಂದ ಜನರು ಬೆಂಗಳೂರಿಗೆ ಹಿಂತಿರುಗಲು ಸಹ ವಿಶೇಷ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ.

​​ಪ್ರಯಾಣಿಕರನ್ನ ಪ್ರೋತ್ಸಾಹಿಸಲು ಹಾಗೂ ಹಬ್ಬದ ಪ್ರಯಾಣವನ್ನ ಸುಲಭಗೊಳಿಸಲು ವಿಶೇಷ ರಿಯಾಯಿತಿಗಳನ್ನ ಕೆಎಸ್‌ಆರ್‌ಟಿಸಿ ಘೋಷಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡಾ 5ರಷ್ಟು ರಿಯಾಯಿತಿ ಸಿಗಲಿದೆ.ಅದೇ ರೀತಿ ಹೋಗುವ ಮತ್ತು ಬರುವ ಎರಡೂ ಕಡೆಯ ಪ್ರಯಾಣದ ಟಿಕೆಟ್‌ಗಳನ್ನ ಒಟ್ಟಿಗೆ ಕಾಯ್ದಿರಿಸಿದಲ್ಲಿ, ಬರುವ ಪ್ರಯಾಣದ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಪ್ರಯಾಣಿಕರು ನಿಲ್ದಾಣಗಳಿಗೆ ತೆರಳುವ ಮುನ್ನ ತಮ್ಮ ಟಿಕೆಟ್‌ನಲ್ಲಿ ನಮೂದಿಸಿರುವ ಬಸ್ ನಿಲ್ದಾಣ ಅಥವಾ ಪಿಕ್‌ಅಪ್ ಪಾಯಿಂಟ್‌ಗಳನ್ನ ಸರಿಯಾಗಿ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ. ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಮತ್ತು ಪುದುಚೇರಿ ರಾಜ್ಯಗಳ ಪ್ರಮುಖ ನಗರಗಳಲ್ಲಿರುವ ನಿಗಮದ ಮುಂಗಡ ಆಸನ ಕಾಯ್ದಿರಿಸುವ ಕೌಂಟರ್‌ಗಳಲ್ಲೂ ಟಿಕೆಟ್ ಪಡೆಯಬಹುದು. ​ಹೆಚ್ಚುವರಿ ಸಾರಿಗೆಯ ವೇಳಾಪಟ್ಟಿ ಹಾಗೂ ಇ-ಟಿಕೆಟ್ ಬುಕ್ಕಿಂಗ್‌ಗಾಗಿ ನಿಗಮದ ಅಧಿಕೃತ ವೆಬ್‌ಸೈಟ್ ksrtc.karnataka.gov.in ಅಥವಾ ksrtc.in ಗೆ ಭೇಟಿ ನೀಡಬಹುದು. ನಿಗಮದ ವ್ಯಾಪ್ತಿಯ ಎಲ್ಲಾ ತಾಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣಗಳಿಂದಲೂ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಸ್ಥಳೀಯವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ನಡೆಯಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.


Share It

You cannot copy content of this page