ಬೆಂಗಳೂರು: ಎನ್‌ಡಿಆರ್‌ಎಫ್ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ.
ಇಲ್ಲಿಯವರೆಗೆ ಮೊದಲ ಹಂತದಲ್ಲಿ 2000 ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿ ಒಟ್ಟು 32.12 ಲಕ್ಷ ರೈತರ ಖಾತೆಗೆ ಈ ದಿನದವರೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇನ್ನೂ ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ. ಇದಲ್ಲದೆ, ಸುಮಾರು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ನಷ್ಟಕ್ಕೆ ಪರಿಹಾರವಾಗಿ ತಲಾ 3,000 ರೂ. ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ. ನೀರು ಮತ್ತು ಮೇವಿನ ನಿರ್ವಹಣೆಗಾಗಿ ಇಲ್ಲಿಯವರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 202 ಸಭೆಗಳನ್ನು ನಡೆಸಲಾಗಿದೆ ಹಾಗೂ 462 ತಾಲೂಕು ಮಟ್ಟದ ಟಾಸ್ಕ್ಪೋರ್ಸ್ ಸಭೆಗಳನ್ನು ನಡೆಸಲಾಗಿದೆ ಎಂದಿದ್ದಾರೆ.
270 ಗ್ರಾಮಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 594 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. 153 ನಗರ ಪ್ರದೇಶದ ವಾರ್ಡ್ಗಳಿಗೆ ಟ್ಯಾಂಕರ್ ಮುಖಾಂತರ ಮತ್ತು 35 ವಾರ್ಡ್ಗಳಿಗೆ ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಅವಶ್ಯಕತೆಯಿರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್‌ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಬರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಗಳ ಖಾತೆಗಳಲ್ಲಿ ರೂ. 836 ಕೋಟಿ ಅನುದಾನ ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.