ಬೆಂಗಳೂರಿನ ಆಹಾರ ಪ್ರಿಯರಿಗೆ ಆಹಾರ ಇಲಾಖೆ ಶಾಕಿಂಗ್ ಸುದ್ದಿ ನೀಡಿದೆ. ಅದರಲ್ಲೂ, ಹೋಟೆಲ್‌ಗೆ ತೆರಳಿ ಇಡ್ಲಿ ಸವಿಯುವ ಗ್ರಾಹಕರಂತೂ ಇನ್ನು ಮುಂದೆ ಸಾಕಷ್ಟು ಎಚ್ಚರಿಕೆ ವಹಿಸಲೇಬೇಕಾಗಿದೆ. ಇದಕ್ಕೆ ಕಾರಣ, ಆಹಾರ ಇಲಾಖೆ ಪರೀಕ್ಷೆಯಲ್ಲಿ ಕಂಡುಬಂದ ಅಂಶ. ಬೆಂಗಳೂರಿನ ಅನೇಕ ಹೋಟೆಲ್‌ಗಳಲ್ಲಿ ತಯಾರಾಗುವ ಇಡ್ಲಿ ಅಸುರಕ್ಷಿತ ಎಂಬ ಆಘಾತಕಾರಿ ಅಂಶ ಆಹಾರ ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ.
ಬೆಂಗಳೂರಿನ ವಿವಿಧೆಡೆಗಳಿಂದ ಇಡ್ಲಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 35ಕ್ಕೂ ಹೆಚ್ಚು ಇಡ್ಲಿ ಮಾದರಿಗಳು ಅಸುರಕ್ಷಿತ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಇದು, ರಸ್ತೆಬದಿಯ ಇಡ್ಲಿ ಖರೀದಿಸಿ ತಿನ್ನುವ ಮೊದಲು ಎರಡು ಬಾರಿ ಯೋಚಿಸುವಂತೆ ಮಾಡಿದೆ.
ಇಡ್ಲಿಯಿಂದ ಕ್ಯಾನ್ಸರ್: ಹೇಗೆ ಸಾಧ್ಯ, ಕಾರಣವೇನು?
ಬೆಂಗಳೂರಿನ ಹಲವಡೆ ಇತ್ತೀಚೆಗೆ ಇಡ್ಲಿ ತಯಾರಿಸಲು ಬಟ್ಟೆಯ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗುತ್ತಿದೆ. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಹಾಳೆಯು ಶಾಖಕ್ಕೆ ಒಡ್ಡಿಕೊಂಡು ಹಾನಿಕಾರಕ ವಸ್ತುವನ್ನು ಹೊರಸೂಸುತ್ತಿದೆ. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.
500ಕ್ಕೂ ಹೆಚ್ಚು ಇಡ್ಲಿ ಮಾದರಿಯ ಸಂಗ್ರಹ
ತಜ್ಞರ ಎಚ್ಚರಿಕೆ ಬೆನ್ನಲ್ಲೇ ಆಹಾರ ಇಲಾಖೆ ಬೆಂಗಳೂರಿನ ಹಲವಡೆಯಿಂದ ಇಡ್ಲಿ ಮಾದರಿಗಳನ್ನು ಸಂಗ್ರಹ ಮಾಡಿದೆ. ಆಹಾರ ಹಾಗೂ ಗುಣಮಟ್ಟ ಇಲಾಖೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ 500ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿದೆ. ಹೋಟೆಲ್ ಹಾಗೂ ತಿಂಡಿಗಳ ಅಂಗಡಿಗಳಿಂದಲೂ ಮಾದರಿ ಸಂಗ್ರಹ ಮಾಡಲಾಗಿದೆ. ಇವುಗಳಲ್ಲಿ 35ಕ್ಕೂ ಹೆಚ್ಚು ಇಡ್ಲಿ ಸ್ಯಾಂಪಲ್ಸ್ ಅಸುರಕ್ಷಿತ ಎಂಬ ವರದಿ ಬಂದಿದೆ.
ಇನ್ನೂ ನೂರಾರು ಇಡ್ಲಿ ಸ್ಯಾಂಪಲ್ಸ್ ವರದಿಗೆ ಕಾಯಲಾಗುತ್ತಿದೆ. ಪೂರ್ಣ ವರದಿ ಕೈಸೇರಿದ ಬಳಿಕ ಪ್ಲಾಸ್ಟಿಕ್ ಪೇಪರ್ ನಿಷೇಧಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ.