ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಪರ್ಸ್ ಕಳವು: ಪರದಾಡಿದ ಡಿಸ್ಕೋ ಕಿಂಗ್ ಮಿಥುನ್ ಚಕ್ರವರ್ತಿ
ಕೊಲ್ಕಾತ್ತಾ: ಬಿಜೆಪಿ ಅಭ್ಯರ್ಥಿ ಅಪರ್ಣಾ ಸೇನ್ ಗುಪ್ತಾ ಪರ ಪ್ರಚಾರ ಮಾಡಲು ಆಗಮಿಸಿದ್ದರು. ಈ ವೇಳೆ ನೂಕುನುಗ್ಗಲಿನಲ್ಲಿ ಕಾರ್ಯಕರ್ತರ ನಡುವೆ ಅವರ ಪರ್ಸ್ ಕಳುವಾಗಿತ್ತು ಎನ್ನಲಾಗಿದೆ.
ಇತ್ತೀಚೆಗೆ ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ ಹೇಳಿಕೆಗೆ ಕ್ಷಮೆ ಕೋರುವಂತೆ ಅವರಿಗೆ ಪಾಕಿಸ್ತಾನದ ಅಂಡರ್ವಲ್ಡ್ ಡಾನ ಕಡೆಯಿಂದ ಬೆದರಿಕೆ ಬಂದಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಅವರು ಸಭೆಯಲ್ಲಿ ಮಾತನಾಡುತ್ತಿದ್ದರು. ನಾನು ಯಾವುದೇ ಸಮುದಾಯಕ್ಕೆ ಅವಮಾನವಾಗುವ ರೀತಿಯ ಹೇಳಿಕೆ ನೀಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದರು.
ಇದೇ ವೇಳೆ ಅವರನ್ನು ಸುತ್ತುವರಿದ ಬಿಜೆಪಿ ಕಾರ್ಯಕರ್ತರು, ಅವರ ಪರ್ಸ್ ಎಗರಿಸಿದ್ದರು. ಸ್ವಲ್ಪ ಸಮಯದ ನಂತರ ತಮ್ಮ ಜೇಬು ನೋಡಿಕೊಂಡ ಮಿಥುನ್ ಚಕ್ರವರ್ತಿ, ಸುತ್ತಲೂ ಇದ್ದವರನ್ನು ಪ್ರಶ್ನೆ ಮಾಡಿದರು. ನಂತರ ಮೈಕ್ ಮೂಲಕ ಘೋಷಣೆ ಮಾಡಲಾಯಿತು. ವೇದಿಕೆ ಮೇಲಿದ್ದವರ ಜೇಬನ್ನೆಲ್ಲ ಹುಡುಕುಲು ಶುರುಮಾಡಿದರು.
ಈ ವೇಳೆ ಎಚ್ಚೆತ್ತುಕೊಂಡ ಜೇಬುಗಳ್ಳರು, ಮಿಥುನ್ ಚಕ್ರವರ್ತಿ ಅವರ ಪರ್ಸ್ ಅನ್ನು ವೇದಿಕೆ ಮೇಲೆ ಬಿಸಾಕಿದ್ದರು. ಯಾರೋ ಕಾರ್ಯಕರ್ತರು ಅಲ್ಲಿ ಬಿದ್ದಿರುವುದನ್ನು ನೋಡಿ ತಂದುಕೊಟ್ಟರು. ಇದರಿಂದ ಮಿಥುನ್ ಖುಷಿಯಾದರು. ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿರುವುದು ಬಿಜೆಪಿಗೆ ಮುಜುಗರ ತರಿಸಿದೆ ಎಂಬ ಚರ್ಚೆ ಆರಂಭಗೊಂಡಿದ್ದು, ಸ್ಥಳೀಯ ಬಿಜೆಪಿ ನಾಯಕರು ಇದನ್ನು ತಿರಸ್ಕರಿಸಿದ್ದು,ಪರ್ಸ್ ಕಳ್ಳತನ ಆಗಿರಲಿಲ್ಲ, ಅಚಾನಕ್ ಆಗಿ ಬಿದ್ದು ಹೋಗಿತ್ತು ಎಂದು ಹೇಳಿದ್ದಾರೆ.