ಮೈಸೂರು: ಅಂತಾರಷ್ಟ್ರೀಯ ಕ್ರೀಡೆಯಾಗಿರುವ ಕರಾಟೆಯು ಅತ್ಯಂತ ಧೈರ್ಯ ಮತ್ತು ಚಾಕಚಕ್ಯತೆಯ ಅತ್ಯುತ್ತಮ ಕ್ರೀಡೆಯಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಭಾನುವಾರ ಸಂಜೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 19ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾಟೆ ಕಲಿಕೆಯಿಂದ ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಉಪಯೋಗವಾಗಲಿದೆ. ಕರಾಟೆಯಂತಹ ಸಮರ ಕಲೆಗಳು ಸ್ವಾಭಿಮಾನ ಜೀವನ ಕಲಿಸುವ ಜೊತೆಗೆ ಅಗತ್ಯ ಕೌಶಲ್ಯಗಳನ್ನು ವೃದ್ಧಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಕ್ರೀಡಾ ಭಾವನೆಯಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಮಹಮ್ಮದ್ ಆಲಿ ಬಹುದೊಡ್ಡ ಖ್ಯಾತ ಕುಸ್ತಿಪಟು. ಮೂರು ಬಾರಿಯ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಆಗಿದ್ದರು. ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕುಸ್ತಿಪಟು ಎಂದು ಪರಿಗಣಿಸಲಾಗುತ್ತದೆ. ಅಂತವರನ್ನು ಸ್ಪೂರ್ತಿಯಾಗಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ, ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞರಾದ ಪಿ.ವಿ.ನಂಜರಾಜ ಅರಸ್, ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಸೋಸಲೆ ಸಿದ್ದರಾಜು, ಎಸಿಪಿ ಪ್ರತಾಪ್ ರೆಡ್ಡಿ, ಯುವ ಸಬಲೀಕರಣ ಹಾಗೂ ಕೀಡಾ ಇಲಾಖೆ ಸಹಾಯಕ ನಿರ್ದೇಶಕ ಬಾಸ್ಕರ್ ನಾಯಕ್, ಅಕಾಡೆಮಿ ಕಾರ್ಯದರ್ಶಿ ದೀಪಕ್ ಕುಮಾರ್, ಟಿ.ಪಿ.ಬಸವಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.