ಅಪರಾಧ ಸುದ್ದಿ

ರಿವರ್ಸ್​ ತೆಗೆದುಕೊಳ್ಳುವಾಗ ಹರಿದ ಕಾರು; ಓರ್ವ ವಿದ್ಯಾರ್ಥಿನಿ ಸಾವು, ಮೂವರು ಗಂಭೀರ

Share It

ರಾಯಚೂರು: ಕಾಲೇಜು ಮುಗಿಸಿ ಮನೆಗೆ ವಾಪಸ್ ತೆರಳುತ್ತಿದ್ದ ನಾಲ್ವರು ವಿದ್ಯಾರ್ಥಿನಿಯರ ಮೇಲೆ ನಿಯಂತ್ರಣ ತಪ್ಪಿ ಕಾರು ಹರಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

ಸಿಂಧನೂರು ನಗರದ ಗಂಗಾವತಿ ಮುಖ್ಯರಸ್ತೆ ಎವಿಎಸ್ ಬ್ರಿಲಿಯಂಟ್ ಕಾಲೇಜು ಸಮೀಪ ರ್ದುಘಟನೆ ಸಂಭವಿಸಿದೆ. ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪಿನ ನಿವಾಸಿ ಭೂಮಿಕಾ(17) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಮಹೇಶ್ವರಿ, ಮೇಘನಾ ಹಾಗೂ ಜಹೀಬಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಎವಿಎಸ್ ಬ್ರಿಲಿಯಂಟ್ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುತ್ತಿದ್ದ ವೇಳೆ ಮಹೇಂದ್ರ ತಾರ್ ಕಾರು ರಿವರ್ಸ್ ತೆಗೆದುಕೊಳ್ಳುವಾಗ ನಿಯಂತ್ರಣ ತಪ್ಪಿ ವಿದ್ಯಾರ್ಥಿನಿಯರ ಮೇಲೆ ಹರಿದಿದೆ.

ಘಟನೆ ಮಾಹಿತಿ ಕೂಡಲೇ ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಹಾಗೂ ನಗರ ಪೊಲೀಸ್ ಠಾಣೆ ಪಿಐ ವೀರಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆ ದೃಶ್ಯ ಸಿಸಿಟಿವಿ‌ ಕ್ಯಾಮರಾದಲ್ಲಿ‌ ಸೆರೆಯಾಗಿದೆ.


Share It

You cannot copy content of this page