ಬೆಂಗಳೂರು: ಆನ್‌ಲೈನ್ ಡೇಟಿಂಗ್ ಆ್ಯಪ್‌ನಲ್ಲಿ ಎಐ ನಿಂದ ಸೃಷ್ಟಿಸಿದ ಯುವತಿಯ ಜತೆಗಿನ ಸಂಪರ್ಕದ ಫಲವಾಗಿ ಟೆಕ್ಕಿಯೊಬ್ಬ ಲಕ್ಷಾಂತರ ರುಪಾಯಿ ವಂಚನೆಗೆ ಒಳಗಾಗಿರುವ ಪ್ರಕರಣದ ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರಿನ ಈಜಿಪುರದಲ್ಲಿ ವಾಸವಿರುವ ಟೆಕ್ಕಿಯೊಬ್ಬ ಡೇಟಿಂಗ್ ಆ್ಯಪ್‌ವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ, ಆಕೆ ಆತನೊಂದಿಗೆ ಆತ್ಮೀಯವಾಗಿ ಮಾತನಾಡುತ್ತ ಇವನನ್ನು ಆಕರ್ಷಿಸಿದ್ದಳು. ಇದರ ಭಾಗವಾಗಿ, ವಾಟ್ಸಾಪ್ ಸಂದೇಶದ ಮೂಲಕ ಇಬ್ಬರು ಸಂವಹನದಲ್ಲಿದ್ದರು ಎನ್ನಲಾಗಿದೆ.
ಅನಂತರ ವಾಟ್ಸಾಪ್ ಮೂಲಕ ವಿಡಿಯೋ ಕರೆ ಮಾಡಿದ ಯುವತಿ, ಈತನನ್ನು ವಿವಸ್ತ್ರನಾಗುವಂತೆ ಕೇಳಿಕೊಂಡಿದ್ದಾಳೆ. ಯುವತಿಯ ಮೋಡಿಗೆ ಮನವೋತು ವಿವಸ್ತ್ರನಾದ ಟೆಕ್ಕಿಗೆ ಕರೆ ಕಟ್ ಆದ ಕೆಲವೇ ಕ್ಷಣಗಳಲ್ಲಿ ಬೆದರಿಕೆ ಕರೆಗಳು ಬರತೊಡಗಿವೆ. ತನ್ನ ಬೆತ್ತಲೆ ವಿಡಿಯೋಗಳನ್ನು ನಿನ್ನ ಸ್ನೇಹಿತರಿಗೆ ಹಾಗೂ ಪರಿಚಯಸ್ಥರಿಗೆ ಕಳುಹಿಸುತ್ತೇವೆ ಎಂದು ಬೆದರಿಸಿದ ಕಿಡಿಗೇಡಿಗಳು ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಮರ್ಯಾದೆ ಕಳೆದುಕೊಳ್ಳುವ ಭೀತಿಯಿಂದ ಅವರಿಗೆ ಹಂತಹಂತವಾಗಿ ಸುಮಾರು 1.5 ಲಕ್ಷ ರು.ಗಳನ್ನು ಟೆಕ್ಕಿ ಕಳುಹಿಸಿಕೊಟ್ಟಿದ್ದಾನೆ ಎನ್ನಲಾಗಿದೆ. ಮತ್ತೇ ಬೇಡಿಕೆ ಹೆಚ್ಚಾದಾಗ ಆತ ಪೊಲೀಸರ ಮೊರೆ ಹೋಗಿದ್ದು, ಈ ಕುರಿತು ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎಐ ಯುವತಿಯ ಮೈಮಾಟಕ್ಕೆ ಮರಳು: ಪೊಲೀಸರ ತನಿಖೆಯ ಪ್ರಕಾರ ಟೆಕ್ಕಿ ಡೇಟಿಂಗ್ ಆ್ಯಪ್ ಮೂಲಕ ಇಶಾನಿ ಎಂಬ ಅಕೌಂಟ್‌ಗೆ ಕನೆಕ್ಟ್ ಆಗಿದ್ದು, ಆ ಅಕೌಂಟ್‌ನ ಮಹಿಳೆ ಎಐ ನಿರ್ಮಿತ ಡೀಫ್ ಫೇಕ್ ಎಂದು ಹೇಳಲಾಗಿದೆ. ಇದೇ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ, ಟೆಕ್ಕಿಗೆ ದುಷ್ಕರ್ಮಿಗಳು ವಂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಆರೋಪಿಗಳ ಪತ್ತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

