ಅಪರಾಧ ಸುದ್ದಿ

ಪ್ರಿಯಕರನಿಗಾಗಿ ಮೂರು ಮಕ್ಕಳ ಜತೆಗೆ ರೈಲ್ವೆ ಟವರ್ ಏರಿದ ಮಹಿಳೆ: 9 ಗಂಟೆಗಳ ಕಾರ್ಯಾಚರಣೆ ನಂತರ ರಕ್ಷಣೆ

Share It

ಲಕ್ನೋ: ತನ್ನ ಪ್ರಿಯಕರನ ಜತೆಗೆ ವಾಸಿಸಲು ಅವಕಾಶ ನೀಡಬೇಕು ಎಂದು ರೊಚ್ಚಿಗೆದ್ದ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ರೈಲ್ವೆ ಟವರ್ ಹತ್ತಿ ಕುಳಿತಿದ್ದು, ಆತಂಕದ ವಾತಾವರಣ ಸೃಷ್ಟಿಸಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗೊಂಡಾ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಗೀತಾ ದೇವಿ ಎಂಬ ಮಹಿಳೆ ರೈಲ್ವೆ ನಿಲ್ದಾಣದ ಎಸ್ಕಲೇಟರ್ ಬಳಿಯ ಟವರ್ ಹತ್ತಿದ್ದಾಳೆ. ಆಕೆಯೊಂದಿಗೆ ತನ್ನ ಮೂವರು ಮಕ್ಕಳನ್ನು ಆಕೆ ಕರೆದೊಯ್ದಿದ್ದು, ಸುಮಾರು 100 ಅಡಿ ಎತ್ತರದ ಕಂಬದ ಮೇಲೆ ಆಕೆ ಕುಳಿತಿದ್ದಳು.

ಆಕೆ ತನ್ನ ಪ್ರಿಯಕರ ರಾಮ್ ಅಕಬಲ್ ಎಂಬಾತನೊಂದಿಗೆ ಬಾಳಲು ಅವಕಾಶ ಕೊಡುವವರೆಗೆ ಕೆಳಗಿಳಿಯುವುದಿಲ್ಲ ಎಂಬ ಷರತ್ತು ವಿಧಿಸಿದ್ದಳು. ಸ್ಥಳಕ್ಕೆ ಆರ್‌ಪಿಎಳ್, ಜಿಆರ್‌ಪಿ ಮತ್ತು ಸ್ಥಳೀಯ ಪೊಲೀಸರು ಆಗಮಿಸಿ, ಕೆಳಗಿಳಿಯುವಂತೆ ಮನವಿ ಮಾಡಿಕೊಂಡರೂ ಆಕೆ ಕೇಳಲಿಲ್ಲ. ಸತತ 9 ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಿ ಆಕೆಯನ್ನು ಕೆಳಗಿಳೀಸಲಾಯಿತು.

ಅಂತಿಮವಾಗಿ ಟವರ್ ಏರಿದ ನಾಲ್ವರು ಸದಸ್ಯರ ಎಸ್‌ಡಿಆರ್‌ಎಫ್ ತಂಡವು ಆಕೆಯನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಯಿತು. ಸಂಜೆ 4.30ರ ಸುಮಾರಿಗೆ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳನ್ನು ಸುರಕ್ಷಿತವಾಗಿ ಕೆಳಗಿಳಿಸಿದ ತಂಡ ಕೊನೆಗೆ ನಿಟ್ಟುಸಿರುಬಿಟ್ಟಿತು.


Share It

You cannot copy content of this page