ಸುದ್ದಿ

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಚಾಕು ಇರಿದು ಹತ್ಯೆ: ಪ್ರಿಯಕರ ಸೇರಿ ಇಬ್ಬರ ಬಂಧನ

Share It

ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಸಹೋದರನೊಂದಿಗೆ ಸೇರಿ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯುವತಿ ಅಮೃತಾ ಹತ್ಯೆ ಆರೋಪದಡಿ ಪ್ರಿಯಕರ ಧನುಷ್ ಹಾಗೂ ಆತನ ಸಹೋದರ ಸೂರ್ಯನನ್ನು ಬಂಧಿಸಲಾಗಿದೆ. ಜುಲೈ 13ರಂದು ಘಟನೆ ನಡೆದಿದ್ದು, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅಮೃತಾ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್​​ಎಎಲ್ ಕೋಡಿಚಿಕ್ಕನಹಳ್ಳಿಯಲ್ಲಿ ಅಮೃತಾ ಕುಟುಂಬ ವಾಸವಾಗಿದ್ದು, ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಳು. ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಯವಾಗಿದ್ದ ಧನುಷ್ ಹಾಗೂ ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಧನುಷ್ ತನಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದ್ದು, ಒಂದು ಮಗು ಇರುವುದನ್ನು ಮುಚ್ಚಿಟ್ಟಿದ್ದ. ಈ ಸತ್ಯ ತಿಳಿಯುತ್ತಿದ್ದಂತೆ ಅಮೃತಾ ಆತನಿಂದ ದೂರವಾಗಿದ್ದಳು.

ಇದರಿಂದ ಆಕ್ರೋಶಗೊಂಡ ಧನುಷ್‌ನ ತಮ್ಮ ಸೂರ್ಯ, ಅಣ್ಣನ ಪ್ರೀತಿ ನಿರಾಕರಿಸಿದವಳನ್ನು ಬಿಡುವುದಿಲ್ಲ ಎಂದು ಹೇಳಿಕೊಂಡು ಕಳೆದ ಜುಲೈ 13ರಂದು ಸಂಜೆ ಯುವತಿ ಮನೆ ಬಳಿ ತೆರಳಿ ಗಲಾಟೆ ಮಾಡಿ, ಆಕೆ ಬೆನ್ನು ಮತ್ತು ಎದೆಗೆ ಮನಬಂದಂತೆ ಚಾಕುವಿನಿಂದ ಅಟ್ಟಹಾಸ ಮೆರೆದಿದ್ದ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಮೃತಾಳನ್ನು ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೇ, ಜುಲೈ 15ರಂದು ಸಂಜೆ ಆಸ್ಪತ್ರೆಯಲ್ಲಿ ಆಕೆ ಸಾವನ್ನಪ್ಪಿದ್ದಾಳೆ.


Share It

You cannot copy content of this page