ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಹದಿನೈದು ಸಾವಿರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಸ್ಟ್ 18ರಿಂದ ಆರಂಭವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರು(1ರಿಂದ 5ನೇ ತರಗತಿ), ಪ್ರೌಢ ಶಾಲಾ ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-I), ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-II), ಕಂಪ್ಯೂಟರ್ ಸೈನ್ಸ್ ಶಿಕ್ಷಕರು ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್ಲೈನ್ ಅರ್ಜಿ ಸಲ್ಲಿಕೆ ಆಗಸ್ಟ್ 18ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 7 ಕೊನೆಯ ದಿನಾಂಕವಾಗಿದೆ. ರಾಜ್ಯಾದ್ಯಂತ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ಅಕ್ಟೋಬರ್ 5ರಂದು ನಡೆಯಲಿದೆ.
- ಪತ್ರಿಕೆ-1ರ ಪರೀಕ್ಷೆ ಅ.5ರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಮತ್ತು ಪತ್ರಿಕೆ- 2(ಗಣಿತ, ಪರಿಸರ ಅಧ್ಯಯನ, ಸಮಾಜ ವಿಜ್ಞಾನ)ರ ಪರೀಕ್ಷೆ ಮಧ್ಯಾಹ್ನ 2:30ರಿಂದ ಸಂಜೆ 4:30ರ ವರೆಗೆ ನಡೆಯಲಿದೆ.
- ಅಕ್ಟೋಬರ್ 6ರಂದು ಪತ್ರಿಕೆ-2(ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-II)ರ ಪರೀಕ್ಷೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಶಾಲಾ ಶಿಕ್ಷಣ ಇಲಾಖೆಯ ವೆಬ್ಸೈಟ್ https://schooleducation.karnatka.gov.inನಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಮತ್ತು ಅಭ್ಯರ್ಥಿಗಳಿಗೆ ನೀಡಲಾದ ಸೂಚನೆಗಳನ್ನು ಅರ್ಥೈಸಿಕೊಂಡು ಅರ್ಜಿಯನ್ನು ಕ್ರಮಬದ್ದವಾಗಿ ಭರ್ತಿ ಮಾಡುವಂತೆ ಇಲಾಖೆ ಸೂಚಿಸಿದೆ.
ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಅಂಚೆ ಮೂಲಕ ಅಥವಾ ಇನ್ಯಾವುದೇ ಮಾದರಿಯಲ್ಲಿ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.

