ಹಾಸನ: ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಶಿರಗುರ ಗ್ರಾಮದ ಬಳಿ ಕೆಪಿ ಕಾಲರ್ -2 ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಕುಮ್ಕಿ ಆನೆಗಳ ಸಹಾಯದಿಂದ ಈ ಆನೆಯನ್ನು ಸೆರೆ ಹಿಡಿಯಲಾಗಿದೆ.
ಗುರುವಾರ ಬೆಳಗ್ಗೆಯಿಂದ ಸತತ ಏಳು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾಗಿ ನರಹಂತಕ ಕಾಡಾನೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಡಾನೆ ಸೆರೆ ಕಾರ್ಯಾಚರಣೆ ನಾಗೇನಹಳ್ಳಿ ಗ್ರಾಮದ ಅಂಜೀಹಳ್ಳಿ ಬಳಿ ಬೆಳಗ್ಗೆ ಆರಂಭವಾಗಿತ್ತು. ಬಳಿಕ ಅಂಜೀಹಳ್ಳಿ ಹಾಗೂ ಮತ್ತಿಹಳ್ಳಿ ಬಳಿ ಎರಡು ಬಾರಿ ಕಾಡಾನೆ ಡಾಟ್ಗೆ ಸಿಗದೆ ತಪ್ಪಿಸಿಕೊಂಡಿತ್ತು. ಕಾಡಾನೆ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಟಿಎಫ್ ತಂಡ ಹತ್ತಾರು ಕಿಲೋಮೀಟರ್ಗಳಷ್ಟು ಕಾಡಾನೆಯನ್ನು ಹಿಂಬಾಲಿಸಿ ಹರಸಾಹಸಪಟ್ಟರು.
ಕಾಡಾನೆ ಶಿರಗುರ ಗ್ರಾಮದ ಸಮೀಪ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯತಂತ್ರ ಬದಲಿಸಿ ಯೋಜನೆ ರೂಪಿಸಿದರು. ಕುಮ್ಕಿ ಆನೆಗಳ ನೆರವಿನಿಂದ ಕಾಡಾನೆಯನ್ನು ರಸ್ತೆಯತ್ತ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ರಸ್ತೆಗೆ ಬಂದ ಕಾಡಾನೆಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದರು.

