ಹಾಸನ: ಕಳೆದ 11 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೃಹಿಣಿ ಜಯಶೀಲಾ ಬಿ. ಕೆ. ಅಲಿಯಾಸ್ ಪ್ರಿಯಾಂಕಾ ಅವರ ಮೃತದೇಹ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಬುಧವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟಂಬರ್ 19ರ ರಾತ್ರಿ ಪತಿ ಜತೆಯಲ್ಲಿದ್ದಾಗ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಬಳಿ ಏಕಾಏಕಿ ಹೇಮಾವತಿ ನಾಲೆಗೆ ಜಿಗಿದಿದ್ದರು ಎನ್ನಲಾಗಿತ್ತು. ಅಂದಿನಿಂದಲೂ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸಂಬಂಧಿಕರು ವ್ಯಾಪಕ ಶೋಧ ಕಾರ್ಯ ನಡೆಸಿದ್ದರು. ಕಾಲುವೆ ನೀರು ನಿಲ್ಲಿಸಿ, ಸುರಂಗ ಹಾಗೂ ನಾಲೆಯಿಂದ ನೀರು ತುಂಬುವ ಎಲ್ಲಾ ಕೆರೆಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ತುರುವೇಕೆರೆ ಮತ್ತು ತಿಪಟೂರು ಭಾಗದಲ್ಲಿ ಡ್ರೋನ್ ಕ್ಯಾಮರಾಗಳ ಮೂಲಕವೂ ಶೋಧ ನಡೆಸಲಾಗಿತ್ತು. ಅಂತಿಮವಾಗಿ ಕೋಲಾಳ ಕೆರೆಯಲ್ಲಿ ಜಯಶೀಲಾ ಶವವಾಗಿ ಪತ್ತೆಯಾಗಿದ್ದಾರೆ.
ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ : ಬಾಗೂರು ಗ್ರಾಮದ ಕೃಷ್ಣಸ್ವಾಮಿ ಮತ್ತು ಶೋಭ ದಂಪತಿ ಪುತ್ರಿಯಾದ ಜಯಶೀಲಾಗೆ ಎಂಟು ತಿಂಗಳ ಹಿಂದೆಯಷ್ಟೇ ಕುರುವಂಕ ಗ್ರಾಮದ ರಾಜಶೇಖರ್ ಜತೆ ವಿವಾಹವಾಗಿತ್ತು. ಕೆಎಎಸ್ (KAS) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಜಯಶೀಲಾ, ಎರಡೂವರೆ ತಿಂಗಳ ಗರ್ಭಿಣಿಯಾಗಿದ್ದರು. ಆದರೆ, ವರದಕ್ಷಿಣೆಗಾಗಿ ಪತಿ ಕಿರುಕುಳ ನೀಡುತ್ತಿದ್ದ ಹಾಗೂ ಈ ಬಗ್ಗೆ ಹಿಂದೆ ರಾಜಿ ಸಂಧಾನವೂ ನಡೆದಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಪತಿ ರಾಜಶೇಖರನೇ ಜಯಶೀಲಾಳನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮೊದಲ ಮದುವೆ ಮುಚ್ಚಿಟ್ಟಿದ್ದರೇ ಪೋಷಕರು? ಮತ್ತೊಂದೆಡೆ, ಪತಿ ರಾಜಶೇಖರ ಕುಟುಂಬಸ್ಥರು ಜಯಶೀಲಾ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾರೆ. ಜಯಶೀಲಾಗೆ ಈಗಾಗಲೇ ಮೊದಲೇ ಮದುವೆಯಾಗಿದ್ದು, ಈ ಸತ್ಯ ಮುಚ್ಚಿಟ್ಟು ಈ ಮದುವೆ ಮಾಡಿಕೊಡಲಾಗಿತ್ತು. ರಾಜಶೇಖರ ಜತೆ ಮದುವೆ ನಡೆಯುತ್ತಿದ್ದ ದಿನವೇ ಆಕೆಯ ಮೊದಲ ಗಂಡ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೇ ಬಂದಿದ್ದನು. ಮಗಳು ಹಳೆಯ ಗಂಡನ ಜತೆ ಓಡಿ ಹೋಗುತ್ತಾಳೆಂಬ ಭಯದಿಂದ ಆಕೆಯ ಪೋಷಕರು ವಿಷದ ಬಾಟಲಿ ಹಿಡಿದು ಬೆದರಿಸಿ, ಬಲವಂತವಾಗಿ ಮದುವೆ ಮಾಡಿಸಿದ್ದರು ಎಂದು ರಾಜಶೇಖರ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಚನ್ನರಾಯಪಟ್ಟಣ ಠಾಣೆ ಪೊಲೀಸರು, ಜಯಶೀಲಾ ನಾಪತ್ತೆಯಾಗಿದ್ದ ಪ್ರಕರಣ ನಮ್ಮಲ್ಲಿ ದಾಖಲಾಗಿದೆ. ಈಗ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕೋಲಾಳ ಕೆರೆಯಲ್ಲಿ ಪ್ರಿಯಾಂಕಾ ಶವ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಕರಣವನ್ನು ಹಾಸನ ಜಿಲ್ಲೆಗೆ ವರ್ಗಾಯಿಸಿಕೊಂಡು ಬಳಿಕ ತನಿಖೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಜಯಶೀಲಾ ಸಾವು ಆಕಸ್ಮಿಕವೊ, ಆತ್ಮಹತ್ಯೆ ಅಥವಾ ಕೊಲೆನಾ ಎಂಬ ಅಸಲಿ ಸತ್ಯ ಪೊಲೀಸರ ಸಮಗ್ರ ತನಿಖೆ ನಂತರವಷ್ಟೇ ಹೊರಬರಬೇಕಿದೆ.
