ಬೆಂಗಳೂರು : ದೇಶ ಸೇವೆ ಮಾಡಿದ ಸೈನಿಕನಿಗೆ ನೀಡಲು ರಾಜ್ಯ ಸರ್ಕಾರದ ಬಳಿ ಐದು ಎಕರೆ ಭೂಮಿ ಇಲ್ಲದಿರುವುದು ಮತ್ತು ಐದು ಎಕರೆ ಬದಲಿಗೆ 2,400 ಚದರ ಅಡಿ ನಿವೇಶನ ಮಂಜೂರು ಮಾಡಲು ಅನಿವಾರ್ಯವಾಗಿ ಆದೇಶ ಹೊರಡಿಸಬೇಕಾಗಿದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶದಂತೆ ತಮಗೆ ಐದು ಎಕರೆ ಜಮೀನು ಮಂಜೂರು ಮಾಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರದ ಮಾಜಿ ಸೈನಿಕ ಜಿ.ವೇಮಣ್ಣ ಎಂಬುವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ಎಚ್.ಶಾಂತಿಭೂಷಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಪುರಸ್ಕರಿಸಿದೆ.
ಯೋಧನಿಗೆ ನೀಡಲು ಐದು ಎಕರೆ ಭೂಮಿ ರಾಜ್ಯ ಸರ್ಕಾರದ ಬಳಿಯಿಲ್ಲ. ಕರ್ನಾಟಕ ಭೂ ಮಂಜೂರಾತಿ ಅಧಿನಿಯಮಗಳ ನಿಯಮ 8(8) ಕ್ಕೆ ತಂದಿರುವ ತಿದ್ದುಪಡಿ ಅನುಸಾರ ಐದು ಎಕರೆ ಬದಲಿಗೆ 2,400 ಚದರ ಅಡಿ ನಿವೇಶನವಷ್ಟೇ ನೀಡಲು ಅವಕಾಶವಿದೆ. ಈ ನಿಯಮ ಅನ್ವಯ ವೇಮಣ್ಣಗೆ 2,400 ಚದರ ಅಡಿ ನಿವೇಶನವಷ್ಟೇ ನೀಡಲು ಭಾರವಾದ ಮನಸ್ಸಿನಿಂದ ಆದೇಶ ಮಾಡಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದೆ.
ಮಾಜಿ ಸೈನಿಕ ರಾಷ್ಟ್ರಕ್ಕೆ ಸಲ್ಲಿಸಿದ ಸೇವೆ ಮತ್ತು ತ್ಯಾಗದ ಬಗ್ಗೆ ಅರಿವಿದೆ. ಆದಾಗ್ಯೂ, ಅರ್ಜಿದಾರರು ತಿದ್ದುಪಡಿ ನಿಯಮವನ್ನು ಗಮನದಲ್ಲಿಟ್ಟುಕೊಂಡು ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗಾಗಿ, ಕೋರ್ಟ್ ಕೂಡಾ ನಿಯಮ ಮೀರಿ ನಡೆಯಲಾಗದು. ಈ ಮಾತನ್ನು ನಾವು ಇಷ್ಟವಿಲ್ಲದ ಮನಸ್ಸನಿಂದ ಹೇಳುತ್ತಿದ್ದೇವೆ ಎಂದು ಪೀಠ ನುಡಿದಿದೆ.
ಅಲ್ಲದೆ, ನಾಲ್ಕು ತಿಂಗಳ ಅವಧಿಯಲ್ಲಿ ವೇಮಣ್ಣಗೆ ಐದು ಎಕರೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ 2022ರ ಡಿ.6ರಂದು ಏಕ ಸದಸ್ಯಪೀಠದ ಮಾಡಿದ ಆದೇಶವನ್ನು ರದ್ದುಪಡಿಸಿದೆ. ಇದೇ ವೇಳೆ, ತಿದ್ದುಪಡಿ ನಿಯಮ ಅನುಸಾರ ವೇಮಣ್ಣ ಅವರ ನ್ಯಾಯಾಂಗ ನಿಂದನೆ ಅರ್ಜಿ ಪರಿಗಣನೆಗೆ ಉಳಿಯುವುದಿಲ್ಲ ಎಂದು ತಿಳಿಸಿ ಅವರ ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ತಮ್ಮ ಸೇವಾ ನಿವೃತ್ತಿ ನಂತರ ವೇಮಣ್ಣ, ಸೈನಿಕರು ಮತ್ತು ಮಾಜಿ ಸೈನಿಕರಿಗೆ ಮೀಸಲಾದ ಕೋಟಾದಡಿಯಲ್ಲಿ ಮಾಗಡಿ ತಾಲೂಕಿನ ಕುದೂರು ಹೋಬಳಿ ಹುಲಿಕಲ್ ಗ್ರಾಮದ ಸರ್ವೆ ಸಂಖ್ಯೆ 383/ಪಿ2ರಲ್ಲಿ ಐದು ಎಕರೆ ಜಮೀನನ್ನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಮನವಿ ತಿಸ್ಕರಿಸಿದ್ದರಿಂದ ವೇಮಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ಹಂತದಲ್ಲಿದ್ದಾಗ ತಾಲೂಕಿನ ಮಡಿಗೊಂಡನಹಳ್ಳಿ ಗ್ರಾಮದ ಸರ್ವೆ 67ರದಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಲು ಪ್ರಸ್ತಾವನೆಯಿದೆ. ಆ ಕುರಿತು ಶಿಫಾರಸು ಮಾಡಲಾಗಿದೆ ಎಂದು ಸರ್ಕಾರ ಮೊಮೊ ಸಲ್ಲಿಸಿತ್ತು. ಅದನ್ನು ಪರಿಗಣಿಸಿದ್ದ ಏಕ ಸದಸ್ಯ ಪೀಠವು ನಾಲ್ಕು ತಿಂಗಳಲ್ಲಿ ಪ್ರಸ್ತಾವನೆ ಅನುಸಾರ ಐದು ಎಕರೆ ಜಮೀನು ಮಂಜೂರು ಮಾಡಲು 2022ರ ಡಿ.6ರಂದು ಆದೇಶಿಸಿತ್ತು.
ಈ ಆದೇಶ ವಾಪಸ್ ಪಡೆಯಲು ಕೋರಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ ಸರ್ಕಾರ, ಮಡಿಗೊಂಡನಹಳ್ಳಿ ಗ್ರಾಮದ ಸರ್ವೆ ನಂ.67ರಲ್ಲಿನ 86.3 ಹೆಕ್ಟೇರ್ ಜಾಗವಿದೆ. ಅದನ್ನು ಮೇಕೆದಾಟು ಯೋಜನೆಗೆ ಸಂಬಂಧಿಸಿ ಪರ್ಯಾಯ ಭೂಮಿಯಾಗಿ ಅರಣ್ಯ ಇಲಾಖೆಗೆ ಕಾಯ್ದಿರಿಸಲು ಗುರುತಿಸಿ ಪ್ರಸ್ತಾಪಿಸಲಾಗಿದೆ. ಇನ್ನೂ ಕರ್ನಾಟಕ ಭೂಮಿ ಮಂಜೂರಾತಿ ಅಧಿನಿಯಮಗಳ ನಿಯಮ 8(8) ಅನ್ವಯ ಅರ್ಹ ಯೋಧ, ಮಾಜಿ ಸೈನಿಕನಿಗೆ ಸರ್ಕಾರದ ಭೂಮಿ ಲಭ್ಯವಿದಿದ್ದಾಗ ವಸತಿ ನಿವೇಶನ ಮಂಜೂರು ಮಾಡಬಹುದಾಗಿದೆ. ಅದರಂತೆ ಮಾಗಡಿ ತಾಲೂಕಿನ ಸೋಲೂರು ತಾಲೂಕಿನ ಶಿರಗನಹಳ್ಳಿ ಗ್ರಾಮದ ಸರ್ವೆ ನಂ.12ರಲ್ಲಿ ರಚಿಸಲಾಗಿರುವ 2,400 ಚದರ ಅಡಿ ವಸತಿ ನಿವೇಶನ ಮಂಜೂರು ಮಾಡಲಾಗಿದೆ. ಅದನ್ನು ಒಪ್ಪಲು ವೇಮಣ್ಣ ನಿರಾಕರಿಸಿದ್ದಾರೆ ಎಂದು ತಿಳಿಸಿತ್ತು. ಸರ್ಕಾರದ ಈ ವಾದ ತಿರಸ್ಕರಿಸಿದ್ದ ಏಕ ಸದಸ್ಯ ಪೀಠ, ಹಿಂದಿನ ಪ್ರಸ್ತಾವನೆಯಂತೆ ವೇಮಣ್ಣಗೆ ಐದು ಎಕರೆ ಮಂಜೂರು ಮಾಡುವಂತೆ 2025ರ ಜೂ.11ರಂದು ಸರ್ಕಾರಕ್ಕೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರವು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
